ಮೂಡುಬಿದಿರೆ: ಶ್ರೀ ಗೋಪಾಲಕೃಷ್ಣ ದೇವಸ್ಥಾನದ 110ನೇ ವರ್ಷದ ಮೊಸರು ಕುಡಿಕೆ ಉತ್ಸವದ ಅಂಗವಾಗಿ ಜವನೆರ್ ಬೆದ್ರ ಫೌಂಡೇಶನ್ ವತಿಯಿಂದ 'ಬೆದ್ರದ ಕೃಷ್ಣೋತ್ಸವ 2026' ಕಾರ್ಯಕ್ರಮವನ್ನು ಸೆಪ್ಟೆಂಬರ್ 5ರಂದು ಕೆ. ಅಮರನಾಥ ಶೆಟ್ಟಿ ವೃತ್ತದ ಬಳಿಯ ವೇಣೂರು ಕೃಷ್ಣಯ್ಯ ವೇದಿಕೆಯಲ್ಲಿ ಆಯೋಜಿಸಲಾಗಿದೆ.
ಉತ್ಸವದ ಅಂಗವಾಗಿ ಆಗಸ್ಟ್ 23ರಂದು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗಾಗಿ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 8.30ರಿಂದ 10 ಗಂಟೆಯವರೆಗೆ ಚಿತ್ರಕಲಾ ಸ್ಪರ್ಧೆ ನಡೆಯಲಿದ್ದು, 1ರಿಂದ 3ನೇ ತರಗತಿ ವಿದ್ಯಾರ್ಥಿಗಳಿಗೆ 'ಶ್ರೀ ಕೃಷ್ಣನ ಪ್ರಿಯ ವಸ್ತುಗಳು', 4ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ 'ಗೋಪಾಲ ಕೃಷ್ಣ' ಹಾಗೂ 8ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ 'ನನ್ನ ಕಲ್ಪನೆಯಲ್ಲಿ ಶ್ರೀ ಕೃಷ್ಣ' ವಿಷಯಗಳನ್ನು ನೀಡಲಾಗಿದೆ.
ಬೆಳಿಗ್ಗೆ 10.15ರಿಂದ 10.45ರವರೆಗೆ ರಾಮಾಯಣ ಮತ್ತು ಮಹಾಭಾರತ ವಿಷಯದ ಕುರಿತು ಲಿಖಿತ ರಸಪ್ರಶ್ನೆ ಸ್ಪರ್ಧೆ ನಡೆಯಲಿದ್ದು, 4ರಿಂದ 7ನೇ ತರಗತಿ ಹಾಗೂ 8ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆ ಆಯೋಜಿಸಲಾಗಿದೆ. ಇದೇ ದಿನ ಭಕ್ತಿಗೀತೆ ಗಾಯನ ಸ್ಪರ್ಧೆ ಹಾಗೂ ಭಗವದ್ಗೀತೆಯ 2ನೇ ಅಧ್ಯಾಯ 'ಸಾಂಖ್ಯ ಯೋಗ' ವಿಷಯದ ಪಾರಾಯಣ ಸ್ಪರ್ಧೆಯೂ ನಡೆಯಲಿದೆ. ಭಕ್ತಿಗೀತೆ ಗಾಯನ ಸ್ಪರ್ಧೆಯಲ್ಲಿ ಹಿನ್ನೆಲೆ ಸಂಗೀತಕ್ಕೆ ಅವಕಾಶವಿರುವುದಿಲ್ಲ. ಶ್ರುತಿ ಬಾಕ್ಸ್ ಬಳಸಲು ಅವಕಾಶ ಕಲ್ಪಿಸಲಾಗಿದೆ.
ಆಗಸ್ಟ್ 23ರಂದು ದೇವಸ್ಥಾನದ ವಠಾರದಲ್ಲಿ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗಾಗಿ 'ಅಷ್ಟಮಿಡ ಗೊಬ್ಬು' ವಿವಿಧ ಮನರಂಜನಾ ಆಟಗಳನ್ನು ಆಯೋಜಿಸಲಾಗಿದೆ. 1ರಿಂದ 8 ವರ್ಷದ ಮಕ್ಕಳಿಗಾಗಿ 'ಮುದ್ದು ಕೃಷ್ಣ ವೀಡಿಯೊ ಸ್ಪರ್ಧೆ'ಯನ್ನೂ ಹಮ್ಮಿಕೊಳ್ಳಲಾಗಿದ್ದು, ಆಗಸ್ಟ್ 1ರಿಂದ 31ರವರೆಗೆ ವೀಡಿಯೊಗಳನ್ನು ಕಳುಹಿಸಬಹುದು. ಈ ಸ್ಪರ್ಧೆಯ ಫಲಿತಾಂಶವನ್ನು ಸೆಪ್ಟೆಂಬರ್ 3ರಂದು ಪ್ರಕಟಿಸಲಾಗುತ್ತದೆ. ಜವನೇರ್ ಬೆದ್ರ ಫೌಂಡೇಶನ್ ಸಂಸ್ಥಾಪಕರು, ಸಂಚಾಲಕರು, ಸಂಯೋಜಕರು, ಸರ್ವ ಸದಸ್ಯರು ಹಾಗೂ ಜವನೇರ್ ಬೆದ್ರ ಅಬ್ಬಕ್ಕ ಬ್ರಿಗೇಡ್ (ಮಹಿಳಾ ಘಟಕ) ಸಂಚಾಲಕರು ಮತ್ತು ಸರ್ವ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಸಾರ್ವಜನಿಕರಿಗೆ ಆಹ್ವಾನಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9964676158 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಸಂಘಟಕರು ತಿಳಿಸಿದ್ದಾರೆ.