ಮೂಡುಬಿದಿರೆ: ಬಾಣಂತಿಯರ ಪರಂಪರೆಯ ಲೇಹ ಮತ್ತು ಉಪಚಾರದ ಆಹಾರವನ್ನು ನಾವೀನ್ಯತೆಯೊಂದಿಗೆ ಉಳಿಸಿ ಬೆಳೆಸಿದ ಸಾಧನೆಗಾಗಿ ಮೂಡುಬಿದಿರೆಯ ಅನುಷಾ ಪ್ರಜ್ವಲ್ ಆಚಾರ್ ಅವರಿಗೆ 2026ನೇ ಸಾಲಿನ ರಾಷ್ಟ್ರಮಟ್ಟದ ತಳಮಟ್ಟದ ನವೋದ್ಯಮ ಗೌರವ ಲಭಿಸಿದೆ. ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಅವರು ಗೌರವ ಸ್ವೀಕರಿಸಿದರು.

ಭಾರತದ ನೀತಿ ಆಯೋಗದ ಅಟಲ್ ಇನ್ನೋವೇಶನ್ ಮಿಶನ್ ನೀಡುವ ಈ ಪ್ರತಿಷ್ಠಿತ ಗೌರವಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಆಯ್ಕೆಯಾದ ಇಬ್ಬರಲ್ಲಿ ಅನುಷಾ ಪ್ರಜ್ವಲ್ ಆಚಾರ್ ಒಬ್ಬರಾಗಿದ್ದಾರೆ.

'ಮಾವೇದಾಸ್' ಹೆಸರಿನಲ್ಲಿ ಪರಂಪರೆಯ ಲೇಹವನ್ನು ಆಧುನಿಕ ರೂಪದಲ್ಲಿ ಪರಿಚಯಿಸಿದ ಅವರ ಪ್ರಯತ್ನಕ್ಕೆ ಈ ಗೌರವ ಸಂದಿದೆ. ಸಮಾರಂಭದಲ್ಲಿ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಉಪಸ್ಥಿತರಿದ್ದರು. ಮೂಲತಃ ಕುಂದಾಪುರದವರಾದ ಅನುಷಾ ಆಚಾರ್, ಬನ್ನಡ್ಕದ ಎಸ್.ಕೆ.ಎಫ್. ಮುಖ್ಯಸ್ಥ ರಾಮಕೃಷ್ಣ ಆಚಾರ್ ಅವರ ಪುತ್ರ ಪ್ರಜ್ವಲ್ ಆಚಾರ್ ಅವರ ಪತ್ನಿಯಾಗಿದ್ದಾರೆ.