ಕಾರ್ಕಳ: ವೈದ್ಯಕೀಯ ಶಿಕ್ಷಣ ಪ್ರವೇಶಕ್ಕಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ನೀಟ್)ಯಲ್ಲಿ ಉನ್ನತ ಸಾಧನೆ ಮಾಡಿ ದೇಶದ ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳಿಗೆ ಸೇರ್ಪಡೆಯಾಗಲಿರುವ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳನ್ನು ಗೌರವಿಸುವ 'ಕ್ರಿಯೇಟಿವ್ ಪ್ರತಿಭಾ ಪರ್ವ' ಕಾರ್ಯಕ್ರಮ ಕಾಲೇಜಿನ ಸಪ್ತಸ್ವರ ಸಭಾಂಗಣದಲ್ಲಿ ನಡೆಯಿತು.

ಪ್ರಾಸ್ತಾವಿಕವಾಗಿ ಮಾತನಾಡಿದ ಅಶ್ವತ್ ಎಸ್.ಎಲ್., ನೀಟ್ ಪರೀಕ್ಷೆಯಲ್ಲಿ ಕಠಿಣ ಪರಿಶ್ರಮದಿಂದ ಯಶಸ್ಸು ಸಾಧಿಸಿದ ವಿದ್ಯಾರ್ಥಿಗಳು ಹಾಗೂ ಅವರ ಹೆತ್ತವರನ್ನು ಗೌರವಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು. ಈ ಬಾರಿಯ ಪರೀಕ್ಷೆಯಲ್ಲಿ ಎದುರಾದ ಗೊಂದಲಗಳು ಮತ್ತು ಒತ್ತಡಗಳ ನಡುವೆಯೂ ವಿದ್ಯಾರ್ಥಿಗಳು ಸಾಧನೆ ಮಾಡಿರುವುದು ಶ್ಲಾಘನೀಯವಾಗಿದ್ದು, ಅಂಕ ಗಳಿಕೆಗೆ ಮಾತ್ರ ಸೀಮಿತವಾಗದೆ ಉತ್ತಮ ನಾಗರಿಕರನ್ನು ರೂಪಿಸುವ ಕಾರ್ಯಕ್ಕೂ ಕ್ರಿಯೇಟಿವ್ ಸಂಸ್ಥೆ ಆದ್ಯತೆ ನೀಡುತ್ತಿದೆ ಎಂದು ಹೇಳಿದರು.

ಗಣಪತಿ ಭಟ್ ಕೆ.ಎಸ್. ಮಾತನಾಡಿ, ಇದು ಕೇವಲ ಬಹುಮಾನ ವಿತರಣೆಯ ಕಾರ್ಯಕ್ರಮವಲ್ಲ; ವಿದ್ಯಾರ್ಥಿಗಳ ಪರಿಶ್ರಮ ಮತ್ತು ಪ್ರತಿಭೆಗೆ ಗೌರವ ಸಲ್ಲಿಸುವ ಜೊತೆಗೆ ಮುಂದಿನ ವರ್ಷದ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗುವ ಕಾರ್ಯಕ್ರಮವಾಗಿದೆ ಎಂದರು. ವಿದ್ಯಾರ್ಥಿಗಳ ಯಶಸ್ಸಿನ ಹಿಂದೆ ಉಪನ್ಯಾಸಕರು, ನಿಲಯ ಪಾಲಕರು ಹಾಗೂ ಹೆತ್ತವರ ತ್ಯಾಗ ಮತ್ತು ಪರಿಶ್ರಮ ಅಡಗಿದ್ದು, ಶಿಕ್ಷಣ ನೀಡಿದ ಶಿಕ್ಷಕರು, ಹೆತ್ತವರು ಮತ್ತು ಸಂಸ್ಥೆಯನ್ನು ಮರೆಯಬಾರದು ಎಂದು ತಿಳಿಸಿದರು.

ಡಾ. ಗಣನಾಥ ಶೆಟ್ಟಿ ಬಿ. ಮಾತನಾಡಿ, ರಾಷ್ಟ್ರೀಯ ಮಟ್ಟದ ಪರೀಕ್ಷೆಗಳಲ್ಲಿ ಎದುರಾಗುವ ಸವಾಲುಗಳಿಂದ ವಿಚಲಿತರಾಗದೆ ಹೆಚ್ಚುವರಿ ಸಮಯವನ್ನು ಓದಿಗೆ ಬಳಸಿಕೊಂಡರೆ ಉತ್ತಮ ಫಲಿತಾಂಶ ಸಾಧಿಸಲು ಸಾಧ್ಯವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಪ್ರಾಂಶುಪಾಲ ಹಾಗೂ ಸಹ ಸಂಸ್ಥಾಪಕರಾದ ವಿದ್ವಾನ್ ಗಣಪತಿ ಭಟ್ ಮಾತನಾಡಿ, ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾ ವಾತಾವರಣ ಹಾಗೂ ಕಾಲೋಚಿತ ಮಾರ್ಗದರ್ಶನ ನೀಡುವುದು ಸಂಸ್ಥೆಯ ಆದ್ಯತೆಯಾಗಿದ್ದು, ಆತ್ಮವಿಶ್ವಾಸ ಮತ್ತು ನಿರಂತರ ಪರಿಶ್ರಮದಿಂದ ಯಶಸ್ಸು ಸಾಧಿಸಬಹುದು ಎಂದು ಹೇಳಿದರು. ಆದರ್ಶ ಎಂ.ಕೆ. ಉಪಸ್ಥಿತರಿದ್ದರು.

ನೀಟ್ ಪರೀಕ್ಷೆಯಲ್ಲಿ ಅತ್ಯುನ್ನತ ಸಾಧನೆ ಮಾಡಿದ ತೇಜಸ್ ಹೆಗಡೆ ಹೆಚ್.ಡಿ., ತೇಜಸ್ ಆರ್.ಬಿ., ಧ್ರುವ ವಿ.ಬಿ., ಲೇಖನ್ ಕಾರ್ಯಪ್ಪ, ಮೋಕ್ಷ ಬಿ.ಎಂ., ಹಿತಾರ್ಥ ವಿ.ಎಸ್. ಹಾಗೂ ನಂದನ್ ಜಿ. ಅವರಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.

ಸಾಧಕ ವಿದ್ಯಾರ್ಥಿಗಳು ಮತ್ತು ಅವರ ಹೆತ್ತವರು ತಮ್ಮ ಅನುಭವಗಳನ್ನು ಹಂಚಿಕೊಂಡು ಸಂಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮವನ್ನು ಲೋಹಿತ್ ಎಸ್.ಕೆ. ನಿರೂಪಿಸಿದರು. ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು.