ಮೂಡುಬಿದಿರೆ: ತುಳುನಾಡಿನ ಹಿರಿಯರು ವರ್ಷಕ್ಕೆ ಮೂರು ಬೆಳೆ ಬೆಳೆಯುವ ಮೂಲಕ ಮಣ್ಣಿನ ಫಲವತ್ತತೆ ಕಾಪಾಡಿಕೊಂಡಿದ್ದು, ಆ ಪರಂಪರೆಯನ್ನು ಮುಂದುವರಿಸುವ ಅಗತ್ಯವಿದೆ. ಕೃಷಿಯಲ್ಲಿ ಎಐ ಹಾಗೂ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಯುವಜನರನ್ನು ಕೃಷಿಯತ್ತ ಆಕರ್ಷಿಸಬಹುದು ಎಂದು ಕೃಷಿ ವಿಶ್ವವಿದ್ಯಾಲಯದ ಪದವೀಧರೆ ಭಕ್ತಿಶ್ರೀ ಆಚಾರ್ಯ ಹೇಳಿದರು.

ಸಪಲಿಗ ಮತ್ತು ಗಾಣಿಗ ಸೇವಾ ಸಂಘ, ಗಾಣಿಗ ಯುವಕ ವೇದಿಕೆ, ಮಹಿಳಾ ವೇದಿಕೆ ಹಾಗೂ ಬೆದ್ರ ಅವರ ಸಂಯುಕ್ತ ಆಶ್ರಯದಲ್ಲಿ ಕಾಂತಾವರ ಬಾರಾಡಿ ಶಾಲೆಯ ಸಮೀಪದ ಗದ್ದೆಯಲ್ಲಿ ಭಾನುವಾರ ನಡೆದ 'ಆಟಿಡ್ ಕೆಸರ್ಡೊಂಜಿ ದಿನ' ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ಅಣಬೆ ಬೇಸಾಯ ಸೇರಿದಂತೆ ಹಲವು ಹೊಸ ಅವಕಾಶಗಳನ್ನು ಬಳಸಿಕೊಂಡು ಕೃಷಿಯನ್ನು ಲಾಭದಾಯಕ ಉದ್ಯಮವಾಗಿ ರೂಪಿಸಬೇಕು ಎಂದು ಕರೆ ನೀಡಿದರು.

ಕಾಂತಾವರ ಕ್ಷೇತ್ರದ ಧರ್ಮಾದರ್ಶಿ ಡಾ.ಜೀವಂಧರ್ ಬಲ್ಲಾಳ್ ಬಾರಾಡಿ ಬೀಡು ಕಾರ್ಯಕ್ರಮ ಉದ್ಘಾಟಿಸಿದರು.

ಯಕ್ಷದೇಗುಲ ಸಂಸ್ಥಾಪಕ ಮಹಾವೀರ ಪಾಂಡಿ ಮುಖ್ಯ ಅತಿಥಿಯಾಗಿ ಮಾತನಾಡಿ, ಸಮಾಜಗಳ ನಡುವೆ ಬಾಂಧವ್ಯ ಬೆಳೆಸುವ ಉದ್ದೇಶದಿಂದ 'ಕೆಸರಿನಲ್ಲೊಂದು ದಿನ' ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ. ಹಳೆಯ ಕೃಷಿ ಸಂಸ್ಕೃತಿ, ಆಟಿ ತಿಂಗಳ ಆಹಾರ ಪದ್ಧತಿ ಹಾಗೂ ಪರಂಪರೆಯನ್ನು ಯುವಪೀಳಿಗೆಗೆ ಪರಿಚಯಿಸುವುದರ ಜೊತೆಗೆ ಸಮಾಜದ ಬಂಧುಗಳು ಒಂದಾಗಿ ಸೇರಿ ಸುಖ-ದುಃಖ ಹಂಚಿಕೊಳ್ಳುವ ವೇದಿಕೆಯಾಗಿವೆ ಎಂದರು.

ಸಂಘದ ಅಧ್ಯಕ್ಷ ರಾಜೇಶ್ ಬಂಗೇರ ಅಧ್ಯಕ್ಷತೆ ವಹಿಸಿದ್ದರು. ಶ್ರೀ ನಾಗಬ್ರಹ್ಮ ಕ್ಷೇತ್ರ ಪುತ್ರನ್ ಆದಿ ಮೂಲಸ್ಥಾನದ ಅಧ್ಯಕ್ಷ ಸೂರ್ಯ ಪುತ್ರನ್ ಹಾಗೂ ಸುಳ್ಯ ಅಗ್ನಿಶಾಮಕ ಠಾಣಾಧಿಕಾರಿ ಕಿರಣ್ ಕುಮಾರ್ ಎಸ್. ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.

ಮಹಿಳಾ ಘಟಕ ಅಧ್ಯಕ್ಷೆ ರೂಪಾ ಪ್ರದೀಪ್, ಯುವ ಘಟಕದ ಅಧ್ಯಕ್ಷ ಸತೀಶ್ ಸಪಳಿಗ ಬಾರಾಡಿ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಥಮ್ ಪಿ. ಪುತ್ರನ್ ಉಪಸ್ಥಿತರಿದ್ದರು.

ರಾಜೇಶ್ ಬಂಗೇರ ಸ್ವಾಗತಿಸಿದರು. ಜಗನ್ನಾಥ ಸಪಳಿಗ ಸನ್ಮಾನ ಪತ್ರ ವಾಚಿಸಿದರು. ರಶ್ಮಿತಾ ಬಂಗೇರ ಕಾರ್ಯಕ್ರಮ ನಿರೂಪಿಸಿದರು. ಪ್ರತಾಪ್ ಬೆಟ್ಕೇರಿ ವಂದಿಸಿದರು.

ಆರಂಭದಲ್ಲಿ ಸಂವಾದ, ರಸಪ್ರಶ್ನೆ ಹಾಗೂ ವಿವಿಧ ಆಟೋಟಗಳು ನಡೆದವು. ಬಳಿಕ ಕೆಸರು ಗದ್ದೆಯಲ್ಲಿ ಮಕ್ಕಳು, ಯುವಕರು, ಮಹಿಳೆಯರು ಹಾಗೂ ಹಿರಿಯರಿಗಾಗಿ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಸಮಾಜದ ಸದಸ್ಯರು ಉತ್ಸಾಹದಿಂದ ಭಾಗವಹಿಸಿದರು. ಈ ಸಂದರ್ಭದಲ್ಲಿ ಆಟಿ ಶೈಲಿಯ ಸಾಂಪ್ರದಾಯಿಕ ಭೋಜನ ಏರ್ಪಡಿಸಲಾಗಿತ್ತು. ವಿಶೇಷ ಅಡುಗೆ ಸಿದ್ಧಪಡಿಸಿದ ಮನೆಗಳಿಗೆ ಪ್ರೋತ್ಸಾಹಕ ಬಹುಮಾನ ವಿತರಿಸಲಾಯಿತು.

ಭೋಜನದ ಪ್ರಾಯೋಜಕತ್ವವನ್ನು ದಿವಂಗತ ವಿಲಾಸಿನಿ ಮುರಳಿದಾಸ್ ಅವರ ಸ್ಮರಣಾರ್ಥ ಮುರಳಿದಾಸ್ ಕಾವೂರು ಮತ್ತು ಮಕ್ಕಳು ವಹಿಸಿದ್ದರು. ವಿವಿಧ ಆಟೋಟಗಳ ಬಹುಮಾನಗಳನ್ನು ದಿವಂಗತ ರಾಜು ಬಿ. ಪುತ್ರನ್ ಅವರ ಸ್ಮರಣಾರ್ಥ ಯೋಗಿನಿ ಪುತ್ರನ್ ನಾರಂಪಾಡಿ ಪ್ರಾಯೋಜಿಸಿದ್ದರು. ಮಾದವ ಮಾರ್ನಾಡು ಅವರಿಗೆ ಅಪಘಾತ ನಿಧಿ ಹಸ್ತಾಂತರಿಸಲಾಯಿತು. ಕಳೆದ ವರ್ಷ ವಿತರಿಸಿದ್ದ ಸಸಿಗಳನ್ನು ಉತ್ತಮವಾಗಿ ಪೋಷಿಸಿದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.