ಮೂಡುಬಿದಿರೆ: ಶ್ರೀ ಗೋಪಾಲಕೃಷ್ಣ ದೇವಸ್ಥಾನ ಮೂಡುಬಿದಿರೆಯ ಐತಿಹಾಸಿಕ 110 ನೇ ವರ್ಷದ ಮೊಸರುಕುಡಿಕೆ ಉತ್ಸವದಲ್ಲಿ ಈ ಬಾರಿ ವಿಶೇಷ ಆಕರ್ಷಣೆಯಾಗಿ ಇಬ್ಬರು ಯಕ್ಷಗಾನೀಯ ಕೃಷ್ಣ ವೇಷಧಾರಿಗಳು ಭಾಗವಹಿಸಲಿದ್ದಾರೆ.

ಮೆರವಣಿಗೆಯ ಉದ್ದಕ್ಕೂ ತೂಗುಹಾಕಲಾಗುವ ಹೆಚ್ಚಿನ ಸಂಖ್ಯೆಯ ಮೊಸರುಕುಡಿಕೆಗಳನ್ನು ಗಮನದಲ್ಲಿಟ್ಟುಕೊಂಡು ಹಾಗೂ ಒಬ್ಬನೇ ಕೃಷ್ಣ ವೇಷಧಾರಿಗೆ ಹೆಚ್ಚಿನ ಹೊರೆ ಆಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಉತ್ಸವ ಸಮಿತಿಯು ಇಬ್ಬರು ಕೃಷ್ಣ ವೇಷಧಾರಿಗಳನ್ನು ನಿಯೋಜಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ.

ಸಾಂಪ್ರದಾಯಿಕವಾಗಿ ಒಬ್ಬ ಕೃಷ್ಣ ವೇಷಧಾರಿ ಮೆರವಣಿಗೆಯ ಕೇಂದ್ರಬಿಂದುವಾಗಿದ್ದರೆ, ಈ ಬಾರಿ ಇಬ್ಬರು ಯಕ್ಷಗಾನೀಯ ಕೃಷ್ಣ ವೇಷಧಾರಿಗಳು ಉತ್ಸವದ ಮೆರವಣಿಗೆಯಲ್ಲಿ ಹೆಜ್ಜೆ ಹಾಕಲಿದ್ದು, ಭಕ್ತರು ಮತ್ತು ಸಾರ್ವಜನಿಕರಿಗೆ ವಿಶಿಷ್ಟ ಅನುಭವವನ್ನು ನೀಡಲಿದ್ದಾರೆ. ಮೆರವಣಿಗೆಯುದ್ದಕ್ಕೂ ನಡೆಯುವ ಮೊಸರುಕುಡಿಕೆ ಒಡೆಯುವ ಸಂಭ್ರಮದಲ್ಲಿ ಇಬ್ಬರೂ ವೇಷಧಾರಿಗಳು ಸಕ್ರಿಯವಾಗಿ ಭಾಗವಹಿಸಲಿದ್ದು, ಉತ್ಸವದ ವೈಭವವನ್ನು ಇನ್ನಷ್ಟು ಹೆಚ್ಚಿಸಲಿದ್ದಾರೆ. 110ನೇ ವರ್ಷದ ಐತಿಹಾಸಿಕ ಮೊಸರುಕುಡಿಕೆ ಉತ್ಸವಕ್ಕೆ ಇದು ಮತ್ತೊಂದು ವಿಶೇಷ ಸೇರ್ಪಡೆಯಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹಾಗೂ ಸಾರ್ವಜನಿಕರು ಪಾಲ್ಗೊಂಡು ಉತ್ಸವವನ್ನು ಯಶಸ್ವಿಗೊಳಿಸಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.