ಮೂಡುಬಿದಿರೆ: ಇಶಾ ಗ್ರಾಮೋತ್ಸವದ ಅಂಗವಾಗಿ ಭಾರತದಾದ್ಯಂತ ನಡೆಯುತ್ತಿರುವ ಗ್ರಾಮೀಣ ಕ್ರೀಡಾ ಹಬ್ಬದ ಭಾಗವಾಗಿ ರೂರಲ್ ಪ್ರೀಮಿಯರ್ ಲೀಗ್ 2026ರ ಮೂಡುಬಿದಿರೆ ವಿಭಾಗದ ಸ್ಪರ್ಧೆಗಳು ಆಗಸ್ಟ್ 9ರಂದು ಭಾನುವಾರ ಸ್ವರಾಜ್ಯ ಮೈದಾನದಲ್ಲಿ ನಡೆಯಲಿವೆ.

ಬೆಳಗ್ಗೆ 9 ಗಂಟೆಗೆ ವಿಭಾಗೀಯ ಪಂದ್ಯಗಳು ಆರಂಭವಾಗಲಿದ್ದು, ಪುರುಷರಿಗೆ ವಾಲಿಬಾಲ್ ಹಾಗೂ ಮಹಿಳೆಯರಿಗೆ ಥ್ರೋಬಾಲ್ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಅದೇ ದಿನ ಬೆಳಗ್ಗೆ 10.30ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಜನಪದ ನೃತ್ಯ ಸ್ಪರ್ಧೆ ನಡೆಯಲಿದೆ. 1ರಿಂದ 4ನೇ ತರಗತಿ, 5ರಿಂದ 7ನೇ ತರಗತಿ ಹಾಗೂ 8ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆ ಏರ್ಪಡಿಸಲಾಗಿದೆ. ಸಾರ್ವಜನಿಕರಿಗೂ ಭಾಗವಹಿಸುವ ಅವಕಾಶ ಕಲ್ಪಿಸಲಾಗಿದ್ದು, ಗುಂಪು ಸ್ಪರ್ಧೆಯಲ್ಲಿ ಕನಿಷ್ಠ ಮೂರು ಮತ್ತು ಗರಿಷ್ಠ ಏಳು ಸದಸ್ಯರು ಇರಬೇಕು. ಪ್ರದರ್ಶನದ ಅವಧಿ ಐದು ನಿಮಿಷಗಳಿಗೆ ಸೀಮಿತವಾಗಿರುತ್ತದೆ.

ಸಾರ್ವಜನಿಕರಿಗಾಗಿ ಗೋಣಿಚೀಲ ಓಟ, ಸೈಕಲ್ ಟೈರ್ ಓಟ, ಲಿಂಬೆ-ಚಮಚ ಓಟ ಹಾಗೂ ಹಗ್ಗಜಗ್ಗಾಟ ಸೇರಿದಂತೆ ಒಟ್ಟು 11 ಜನಪದ ಕ್ರೀಡೆಗಳನ್ನು ಆಯೋಜಿಸಲಾಗಿದೆ. ಸ್ಪರ್ಧೆಗಳಲ್ಲಿ ಭಾಗವಹಿಸಲು ಆಗಸ್ಟ್ 7ರೊಳಗೆ ನೋಂದಣಿ ಮಾಡಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ 9945717428 ಸಂಖ್ಯೆಯನ್ನು ಸಂಪರ್ಕಿಸುವಂತೆ ಆಯೋಜಕರು ತಿಳಿಸಿದ್ದಾರೆ.