ಮೂಡುಬಿದಿರೆ: 2028ರಲ್ಲಿ ಶತಮಾನೋತ್ಸವ ಆಚರಿಸಲಿರುವ ಐತಿಹಾಸಿಕ ತುಳುವ ಮಹಾಸಭೆಯ ಜಾಗತಿಕ ಸಂಘಟನೆಯಾದ ತುಳುವ ಮಹಾಸಭೆ ಇಂಟರ್ನ್ಯಾಷನಲ್ ತನ್ನ ಅಂತರರಾಷ್ಟ್ರೀಯ ಸಂಘಟನಾ ವಿಸ್ತರಣೆಯ ಭಾಗವಾಗಿ ಕತಾರ್, ಒಮಾನ್ ಹಾಗೂ ನೈಜೀರಿಯಾ ಘಟಕಗಳಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಿದೆ.

ಕತಾರ್ ಘಟಕದ ಅಧ್ಯಕ್ಷರಾಗಿ ಖ್ಯಾತ ಉದ್ಯಮಿ, ಸಮಾಜಸೇವಕ ಹಾಗೂ ಎಟಿಎಸ್ ಗ್ರೂಪ್ ಕತಾರ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಮೂಡಂಬೈಲ್ ರವಿ ಶೆಟ್ಟಿ, ಒಮಾನ್ ಘಟಕದ ಅಧ್ಯಕ್ಷರಾಗಿ ಉದ್ಯಮಿ, ಸಮಾಜಸೇವಕ ಹಾಗೂ ಅಬೀರ್ ಗ್ರೂಪ್ ಆಫ್ ಕಂಪನೀಸ್ ಸಂಸ್ಥಾಪಕ-ವ್ಯವಸ್ಥಾಪಕ ನಿರ್ದೇಶಕ ಮಲ್ಲಾರ್ ಶಶಿಧರ ಶೆಟ್ಟಿ ಹಾಗೂ ನೈಜೀರಿಯಾ ಘಟಕದ ಅಧ್ಯಕ್ಷರಾಗಿ ಹರಿಕಥಾ ಪ್ರವಚನಕಾರ, ಯಕ್ಷಗಾನ ಭಾಗವತ, ಸಮಾಜಸೇವಕ ಹಾಗೂ ಎವರೆಸ್ಟ್ ಮೆಟಲ್ಸ್ ನೈಜೀರಿಯಾ ಲಿಮಿಟೆಡ್ ಸಂಸ್ಥೆಯ ಖರೀದಿ ಪ್ರಬಂಧಕ ಶರತ್ ಕುಮಾರ್ ಶೆಟ್ಟಿ ಅವರನ್ನು ನೇಮಕ ಮಾಡಲಾಗಿದೆ.

ಡಾ. ಮೂಡಂಬೈಲ್ ರವಿ ಶೆಟ್ಟಿ ಕಳೆದ ಎರಡೂವರೆ ದಶಕಗಳಿಂದ ಕತಾರ್‌ನಲ್ಲಿ ಉದ್ಯಮಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಸಾವಿರಾರು ಮಂದಿಗೆ ಉದ್ಯೋಗಾವಕಾಶ ಕಲ್ಪಿಸುವ ಮೂಲಕ ಸಮಾಜಮುಖಿ ಸೇವೆ ಸಲ್ಲಿಸುತ್ತಿದ್ದಾರೆ. ಕರ್ನಾಟಕ ಸಂಘ ಕತಾರ್ ಅಧ್ಯಕ್ಷ, ತುಳುಕೂಟ ಕತಾರ್ ಮಹಾಪೋಷಕ ಹಾಗೂ ಮಾಜಿ ಅಧ್ಯಕ್ಷ, ಬಂಟ್ಸ್ ಕತಾರ್ ಸಂಸ್ಥಾಪಕ ಅಧ್ಯಕ್ಷ ಸೇರಿದಂತೆ ಹಲವು ಸಂಘ-ಸಂಸ್ಥೆಗಳಲ್ಲಿ ನಾಯಕತ್ವ ವಹಿಸಿದ್ದಾರೆ. ಸಮಾಜಸೇವೆ, ಕನ್ನಡ-ತುಳು ಸಂಸ್ಕೃತಿಯ ಪ್ರಚಾರ ಹಾಗೂ ಉದ್ಯಮಶೀಲತೆಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಮಲ್ಲಾರ್ ಶಶಿಧರ ಶೆಟ್ಟಿ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮಲ್ಲಾರ್ ಗ್ರಾಮದ ಮೂಲದವರಾಗಿದ್ದು, ಒಮಾನ್‌ನ ಅಬೀರ್ ಗ್ರೂಪ್ ಆಫ್ ಕಂಪನೀಸ್ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಐದು ದಶಕಗಳಿಂದ ಸಮಾಜಸೇವೆ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದು, ಮಹಾದೇವಿ ಕಲ್ಚರಲ್ ಕ್ಲಬ್, ಶ್ರೀ ಅಯ್ಯಪ್ಪ ಸೇವಾ ಸಮಿತಿ ಮಸ್ಕತ್, ಬಾಲಭಾರತಿ ಸ್ಟಡಿ ಸೆಂಟರ್ ಸೇರಿದಂತೆ ಹಲವು ಸಂಘಟನೆಗಳನ್ನು ಸ್ಥಾಪಿಸಿ ಮುನ್ನಡೆಸಿದ್ದಾರೆ. ಭಾರತೀಯ ಪ್ರವಾಸಿ ಮಂಚ್–ಕರ್ನಾಟಕ ಘಟಕದ ಅಧ್ಯಕ್ಷ, ಒಮಾನ್ ಬಂಟ್ಸ್ ಸಂಘದ ಸಂಸ್ಥಾಪಕ ಸದಸ್ಯ ಹಾಗೂ ತುಳು ಲಿಪಿಯ ಪ್ರಚಾರಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಮಂಗಳೂರು ಸಮೀಪದ ಪಡು ನೀರುಮಾರ್ಗದ ಪಡುಪಳ್ಳಿ ಮೂಲದ ಶರತ್ ಕುಮಾರ್ ಶೆಟ್ಟಿ ರೆಫ್ರಿಜರೇಷನ್ ಮತ್ತು ಏರ್ ಕಂಡೀಷನಿಂಗ್ ವಿಭಾಗದಲ್ಲಿ ಡಿಪ್ಲೊಮಾ ಪದವೀಧರರಾಗಿದ್ದು, ಪ್ರಸ್ತುತ ಎವರೆಸ್ಟ್ ಮೆಟಲ್ಸ್ ನೈಜೀರಿಯಾ ಲಿಮಿಟೆಡ್ ಸಂಸ್ಥೆಯಲ್ಲಿ ಖರೀದಿ ಪ್ರಬಂಧಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಯಕ್ಷಗಾನ ಭಾಗವತ, ಹರಿಕಥಾ ಪ್ರವಚನಕಾರ, ಕವಿ, ಲೇಖಕ ಹಾಗೂ ಸಮಾಜಸೇವಕರಾಗಿ ಗುರುತಿಸಿಕೊಂಡಿರುವ ಅವರು ನೈಜೀರಿಯಾದಲ್ಲಿ ಕರ್ನಾಟಕ ಸಂಘ ಕಾನೋ ಸಂಸ್ಥೆಯನ್ನು ಸ್ಥಾಪಿಸಿ ಕನ್ನಡ ಹಾಗೂ ತುಳು ಭಾಷೆ-ಸಂಸ್ಕೃತಿಯ ಪ್ರಚಾರಕ್ಕೆ ಕೊಡುಗೆ ನೀಡಿದ್ದಾರೆ. ಇಂಡಿಯನ್ ಕಲ್ಚರಲ್ ಅಸೋಸಿಯೇಷನ್, ಕಾನೋ, ಹಿಂದೂ ಸ್ವಯಂಸೇವಕ ಸಂಘ ಹಾಗೂ ಸೇವಾ ಇಂಟರ್‌ನ್ಯಾಷನಲ್ ಸಂಘಟನೆಗಳಲ್ಲಿಯೂ ಸಕ್ರಿಯರಾಗಿದ್ದಾರೆ.

ಸಂಘಟನಾ ಸಾಮರ್ಥ್ಯ, ಸಮಾಜಸೇವೆ ಹಾಗೂ ತುಳು ಭಾಷೆ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯ ಉಳಿವು-ಬೆಳವಣಿಗೆಗೆ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ತುಳುವ ಮಹಾಸಭೆ ಇಂಟರ್ನ್ಯಾಷನಲ್‌ನ ಅಂತರರಾಷ್ಟ್ರೀಯ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ಈ ನೇಮಕಾತಿಗಳನ್ನು ಘೋಷಿಸಿದರು.

ಈ ನೇಮಕವನ್ನು ತುಳುವರ್ಲ್ಡ್ ಫೌಂಡೇಶನ್ ಗೌರವಾಧ್ಯಕ್ಷ ಶ್ರೀಹರಿನಾರಾಯಣ ದಾಸ್ ಅಸ್ರಣ್ಣ, ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು, ಕಾರ್ಯದರ್ಶಿ ವಸಂತ ರೈ ಕುತ್ತೇತ್ತೂರು, ನಿರ್ದೇಶಕ ಡಾ. ರಾಜೇಶ್ ಕೃಷ್ಣ ಆಳ್ವ, ತುಳುವ ಮಹಾಸಭೆ ಇಂಟರ್ನ್ಯಾಷನಲ್ ಕರ್ನಾಟಕ ರಾಜ್ಯ ಸಮಿತಿ ಅಧ್ಯಕ್ಷ ದೇವೇಂದ್ರ ಹೆಗ್ಗಡೆ ಕೊಕ್ರಾಡಿ, ಕೇಂದ್ರೀಯ ಸಮಿತಿ ಅಧ್ಯಕ್ಷ ಡಾ. ಅವಿನ್ ಬಿ. ಆರ್. ಆಳ್ವ, ಕೇಂದ್ರೀಯ ಸಮಿತಿ ಕಾರ್ಯದರ್ಶಿ ಅರವಿಂದ್ ಬೆಲ್ಚಾಡ ಹಾಗೂ ಕೇಂದ್ರೀಯ ಸಮಿತಿ ಸಂಚಾಲಕ ವಿಶ್ವನಾಥ ಆಚಾರ್ಯ ಸ್ವಾಗತಿಸಿ, ನೂತನ ಅಧ್ಯಕ್ಷರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.