ಮೂಡುಬಿದಿರೆ: ಶಿವರಾಮ ಕಾರಂತ ಪ್ರತಿಷ್ಠಾನ, ಮೂಡುಬಿದಿರೆ ವತಿಯಿಂದ ಕಳೆದ ಮೂರು ದಶಕಗಳಿಂದ ಹಿರಿಯ ಸಾಹಿತಿ ಶಿವರಾಮ ಕಾರಂತರ ಹೆಸರಿನಲ್ಲಿ ನೀಡಲಾಗುತ್ತಿರುವ ಶಿವರಾಮ ಕಾರಂತ ಪ್ರಶಸ್ತಿಗೆ ಈ ಸಾಲಿನಲ್ಲಿ ನಾಡಿನ ಹಿರಿಯ ವಿದ್ವಾಂಸ ಬೆಳ್ತಂಗಡಿಯ ತಾಳ್ತಜೆ ವಸಂತ ಕುಮಾರ್, ನಾಟಕಗಾರ ಟಿ.ಎನ್. ಸೀತಾರಾಮ್ ಹಾಗೂ ಹಲವು ಸಂಘ-ಸAಸ್ಥೆಗಳಿಗೆ ಆಸರೆಯಾಗಿ ಸಾಹಿತ್ಯ, ಶಿಕ್ಷಣ ಮತ್ತು ಸಂಸ್ಕೃತಿಯ ಸೇವೆ ಸಲ್ಲಿಸುತ್ತಿರುವ ಸಮಾಜ ಮಂದಿರ ಸಭಾ ಆಯ್ಕೆಯಾಗಿವೆ ಎಂದು ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್ ಮಾವಿನಕುಳಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಶಸ್ತಿಯು ತಲಾ ರೂ.20 ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ. ಪ್ರತಿ ವರ್ಷದಂತೆ ಈ ವರ್ಷವೂ ಶಿವರಾಮ ಕಾರಂತ ಪುರಸ್ಕಾರಕ್ಕಾಗಿ ಆಹ್ವಾನಿಸಲಾದ ಕೃತಿಗಳ ಪೈಕಿ ಉಜಿರೆ ಎಸ್‌ಡಿಎಂ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಹಳೆಮನೆ ರಾಜಶೇಖರ ಅವರ 'ಸೂರ್ಯ ಜಲ', ಬೆಂಗಳೂರಿನ ಡಾ. ಕೆ.ಎಸ್. ಚೈತ್ರ ಅವರ 'ದಂತ ಕಥೆಗಳು' ಹಾಗೂ ಗೌರಿಬಿದನೂರು ತಾಲೂಕಿನ ಡಾ. ಕಾ. ವೆಂ. ಶ್ರೀನಿವಾಸ ಮೂರ್ತಿ ಅವರ 'ಕನ್ನಡ ಚಿಂತನ' ಕೃತಿಗಳನ್ನು ಆಯ್ಕೆ ಮಾಡಲಾಗಿದೆ. ಈ ಪುರಸ್ಕಾರವು ತಲಾ ರೂ.10 ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದ್ದು, ಆಯ್ಕೆ ಸಮಿತಿಯ ಶಿಫಾರಸಿನ ಮೇರೆಗೆ ಪುರಸ್ಕಾರಗಳನ್ನು ಘೋಷಿಸಲಾಗಿದೆ ಎಂದು ತಿಳಿಸಿದರು.

ಹೈಸ್ಕೂಲ್ ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿ ಬೆಳೆಸುವ ಉದ್ದೇಶದಿಂದ 'ಶಿವರಾಮ ಕಾರಂತ ಕಾದಂಬರಿ' ಹೆಸರಿನಲ್ಲಿ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವರಿಗೆ ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಗುವುದು ಎಂದು ಜಯಪ್ರಕಾಶ್ ಮಾವಿನಕುಳಿ ಹೇಳಿದರು. ಪ್ರತಿಷ್ಠಾನದ ಉಪಾಧ್ಯಕ್ಷ ಶ್ರೀಪತಿ ಭಟ್, ಸದಸ್ಯ ರಾಜರಾಮ್ ನಾಗರಟ್ಟೆ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.