ಮೂಡುಬಿದಿರೆ: ತುಳು ಚಿತ್ರರಂಗದ ತಾಂತ್ರಿಕ ವಲಯದಲ್ಲಿ ಕಳೆದ ಒಂದು ದಶಕದಿಂದ ಹಾಗೂ ಸಹ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಸಂದೀಪ್ ಬೆದ್ರ ಇದೀಗ ಮೊದಲ ಬಾರಿಗೆ 'ಪಿಚ್ಚರ್' ಚಿತ್ರದ ಮೂಲಕ ನಿರ್ದೇಶಕರಾಗಿ ಸಿನಿಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಕನ್ನಡ, ತುಳು ಮತ್ತು ಕೊಂಕಣಿ ಸೇರಿ 24ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೆಲಸ ಮಾಡಿದ ಅನುಭವವನ್ನು ತಮ್ಮ ಚೊಚ್ಚಲ ನಿರ್ದೇಶನದ ಚಿತ್ರದಲ್ಲಿ ಅನಾವರಣಗೊಳಿಸಿದ್ದಾರೆ.
ತುಳು ಚಿತ್ರರಂಗದ ಹಲವು ಯಶಸ್ವಿ ಸಿನಿಮಾಗಳ ನಿರ್ದೇಶನ ತಂಡದಲ್ಲಿ ಕಾರ್ಯನಿರ್ವಹಿಸಿರುವ ಸಂದೀಪ್ ಬೆದ್ರ, ಪ್ರೇಕ್ಷಕರ ಅಭಿರುಚಿಯನ್ನು ಸಮೀಪದಿಂದ ಅರಿತುಕೊಂಡಿರುವ ನಿರ್ದೇಶಕರಾಗಿದ್ದಾರೆ. ಆ ಅನುಭವವನ್ನೇ ಆಧಾರವಾಗಿಸಿಕೊಂಡು ಸಂಪೂರ್ಣ ಹಾಸ್ಯಮಯ ಕಥಾಹಂದರದ 'ಪಿಚ್ಚರ್' ಚಿತ್ರವನ್ನು ರೂಪಿಸಿದ್ದಾರೆ.
ಈ ವರ್ಷದ ತುಳು ಚಿತ್ರರಂಗದ ದೊಡ್ಡ ತಾರಾಬಳಗ ಹೊಂದಿರುವ ಸಿನಿಮಾಗಳಲ್ಲಿ ಒಂದೆಂದು ಗುರುತಿಸಲ್ಪಟ್ಟಿರುವ 'ಪಿಚ್ಚರ್' ಚಿತ್ರದಲ್ಲಿ ಅನೇಕ ಖ್ಯಾತ ನಟರು, ಹಾಸ್ಯ ಕಲಾವಿದರು ಮತ್ತು ಅನುಭವಿ ತಂತ್ರಜ್ಞರು ಕೈಜೋಡಿಸಿದ್ದಾರೆ. ದೊಡ್ಡ ಕಲಾವಿದರ ಬಳಗ ಹಾಗೂ ತಾಂತ್ರಿಕ ತಂಡವನ್ನು ಸಮನ್ವಯಗೊಳಿಸಿರುವುದು ಸಂದೀಪ್ ಬೆದ್ರ ಅವರ ಅನುಭವಕ್ಕೆ ಸಾಕ್ಷಿಯಾಗಿದೆ.
ಚಿತ್ರದ ಪ್ರೀಮಿಯರ್ ಪ್ರದರ್ಶನ ವೀಕ್ಷಿಸಿದ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮನರಂಜನೆ ಮತ್ತು ಹಾಸ್ಯ ಎರಡನ್ನೂ ಒಳಗೊಂಡ ಕುಟುಂಬ ಸಮೇತ ವೀಕ್ಷಿಸಬಹುದಾದ ಚಿತ್ರ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.
ಇಂದು ಬಿಡುಗಡೆಯಾಗುತ್ತಿರುವ 'ಪಿಚ್ಚರ್' ಚಿತ್ರದ ಮೂಲಕ ಯುವ ನಿರ್ದೇಶಕರಾಗಿ ಸಂದೀಪ್ ಬೆದ್ರ ಹೊಸ ಅಧ್ಯಾಯ ಆರಂಭಿಸುತ್ತಿದ್ದು, ತುಳು ಸಿನಿಪ್ರೇಮಿಗಳು ಚಿತ್ರಮಂದಿರಕ್ಕೆ ತೆರಳಿ ಸಿನಿಮಾವನ್ನು ವೀಕ್ಷಿಸಿ ಬೆಂಬಲಿಸುವಂತೆ ಚಿತ್ರತಂಡ ಮನವಿ ಮಾಡಿದೆ.
ಈ ಕುರಿತು ಚಲನಚಿತ್ರ ನಿರ್ದೇಶಕ ಕಿಶೋರ್ ಮೂಡುಬಿದಿರೆ ಮಾತನಾಡಿ, "ಸಂದೀಪ್ ಬೆದ್ರ ಅವರು ಹಲವು ವರ್ಷಗಳ ಅನುಭವವನ್ನು ಈ ಸಿನಿಮಾದಲ್ಲಿ ಸಮರ್ಥವಾಗಿ ಬಳಸಿಕೊಂಡಿದ್ದಾರೆ. 'ಪಿಚ್ಚರ್' ತುಳು ಚಿತ್ರರಂಗದಲ್ಲಿ ವಿಶೇಷ ಸ್ಥಾನ ಪಡೆಯುವ ಸಿನಿಮಾ ಎಂಬ ವಿಶ್ವಾಸವಿದೆ. ಎಲ್ಲರೂ ಚಿತ್ರವನ್ನು ಚಿತ್ರಮಂದಿರದಲ್ಲೇ ವೀಕ್ಷಿಸಿ ಯುವ ನಿರ್ದೇಶಕನನ್ನು ಪ್ರೋತ್ಸಾಹಿಸಬೇಕು" ಎಂದು ತಿಳಿಸಿದ್ದಾರೆ.