ಮಂಗಳೂರು: ಐಪಿಎಲ್ 2026ರ ಉಳಿದ ಪಂದ್ಯಗಳಿಗಾಗಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡವು ಮಂಗಳೂರು ಮೂಲದ ಪ್ರತಿಭಾವಂತ ಆಲ್‌ರೌಂಡರ್ ಮ್ಯಾಕ್ನೀಲ್ ಹ್ಯಾಡ್ಲಿ ನೊರೊನ್ಹಾ ಅವರನ್ನು ಅಧಿಕೃತವಾಗಿ ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ.

ಕಾಲು ಬೆರಳಿನ ಮೂಳೆ ಮುರಿತದಿಂದಾಗಿ ಟೂರ್ನಿಯಿಂದ ಹೊರಬಿದ್ದಿರುವ ಬೌಲಿಂಗ್ ಆಲ್‌ರೌಂಡರ್ ರಾಮಕೃಷ್ಣ ಘೋಷ್ ಅವರ ಬದಲಿಗೆ ನೊರೊನ್ಹಾ ತಂಡಕ್ಕೆ ನೇಮಕವಾಗಿದ್ದಾರೆ.

ಮುಂಬೈ ಇಂಡಿಯನ್ಸ್ ವಿರುದ್ಧದ ಚೊಚ್ಚಲ ಪಂದ್ಯದಲ್ಲೇ ಸೂರ್ಯಕುಮಾರ್ ಯಾದವ್ ಅವರ ವಿಕೆಟ್ ಪಡೆದು ಗಮನ ಸೆಳೆದಿದ್ದ ರಾಮಕೃಷ್ಣ ಘೋಷ್, ಅದೇ ಪಂದ್ಯದಲ್ಲಿ ಗಾಯಗೊಂಡು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದ್ದರು. ಇದೀಗ ಮಂಗಳೂರು ಮೂಲದ 24 ವರ್ಷದ ಆಟಗಾರ ಮ್ಯಾಕ್ನೀಲ್ ಹ್ಯಾಡ್ಲಿ ನೊರೊನ್ಹಾ ಈ ಸ್ಥಾನವನ್ನು ತುಂಬಲಿದ್ದಾರೆ.

ಮ್ಯಾಕ್ನೀಲ್ ಹ್ಯಾಡ್ಲಿ ನೊರೊನ್ಹಾ ದೇಶೀಯ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಆಯ್ಕೆಗಾರರ ಗಮನ ಸೆಳೆದಿದ್ದಾರೆ. 2024-25ರ ಸಿ.ಕೆ. ನಾಯುಡು ಟ್ರೋಫಿಯಲ್ಲಿ 1,037 ರನ್ ಗಳಿಸಿ ಟೂರ್ನಿಯ ಗರಿಷ್ಠ ರನ್ ಸರದಾರ ಎನಿಸಿಕೊಂಡಿದ್ದರು. ಇದರಲ್ಲಿ ಅಜೇಯ 345 ರನ್‌ಗಳ ಬೃಹತ್ ಮೊತ್ತವೂ ಸೇರಿದೆ. ಕಳೆದ ಮಹಾರಾಜ ಟ್ರೋಫಿಯಲ್ಲಿ ಮಂಗಳೂರು ಡ್ರಾಗನ್ಸ್ ಪರ 253 ರನ್ ಹಾಗೂ 10 ವಿಕೆಟ್ ಪಡೆಯುವ ಮೂಲಕ ತಂಡದ ಪ್ರಶಸ್ತಿಗೆ ನೆರವಾಗಿದ್ದರು.

ಪ್ರಸ್ತುತ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿರುವ ಚೆನ್ನೈ ತಂಡವು ಎಂ.ಎಸ್. ಧೋನಿ, ಖಲೀಲ್ ಅಹ್ಮದ್ ಮತ್ತು ನೋಥನ್ ಎಲ್ಲಿಸ್ ಅವರಂತಹ ಪ್ರಮುಖ ಆಟಗಾರರ ಗಾಯದ ಸಮಸ್ಯೆಯಿಂದ ಬಳಲುತ್ತಿದೆ. ಇಂತಹ ಸಂದರ್ಭದಲ್ಲಿ ನೊರೊನ್ಹಾ ಅವರ ಆಲ್‌ರೌಂಡ್ ಪ್ರದರ್ಶನವು ತಂಡಕ್ಕೆ ಹೆಚ್ಚಿನ ಬಲ ನೀಡುವ ನಿರೀಕ್ಷೆಯಿದೆ.