ಮೂಡುಬಿದಿರೆ: ಎಐ ತಂತ್ರಜ್ಞಾನವನ್ನು ವಿದ್ಯಾರ್ಥಿಗಳು ಕಡ್ಡಾಯವಾಗಿ ಕಲಿಯಬೇಕು. ಎಐ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದರಿಂದ ಶಿಕ್ಷಣ ಸಂಸ್ಥೆಗಳು ಎಐ ಶಿಕ್ಷಣಕ್ಕೂ ಆದ್ಯತೆ ನೀಡಬೇಕು. ಇಲ್ಲದಿದ್ದರೆ ಮುಂದಿನ ಹತ್ತು ವರ್ಷಗಳಲ್ಲಿ ಉದ್ಯೋಗ ಕ್ಷೇತ್ರದಲ್ಲಿ ಗಂಭೀರ ಸವಾಲುಗಳು ಎದುರಾಗಬಹುದು ಎಂದು ಸಚಿವ ಯು.ಟಿ. ಖಾದರ್ ಹೇಳಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸಿರುವ ಆಳ್ವಾಸ್ ಪ್ರಗತಿ 2026 ಉದ್ಯೋಗ ಮೇಳದ 16ನೇ ಆವೃತ್ತಿಗೆ ಚಾಲನೆ ನೀಡಿ ಮಾತನಾಡಿದರು. ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಎಐ ಸೇರಿದಂತೆ ಹೊಸ ತಂತ್ರಜ್ಞಾನಗಳಲ್ಲಿ ಪರಿಣತಿ ಹೊಂದಿದರೆ ಉದ್ಯೋಗಾವಕಾಶಗಳು ಹೆಚ್ಚಿ, ಭವಿಷ್ಯದ ಸವಾಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸಬಹುದು. ಉದ್ಯೋಗ ದೊರೆತ ಬಳಿಕ ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ಕೆಲಸ ಮಾಡಬೇಕು. ಸಣ್ಣ ಕಾರಣಗಳನ್ನು ನೀಡಿ ಉದ್ಯೋಗ ತೊರೆಯದೆ ಕರಾವಳಿಯ ಯುವಕರ ಮೇಲಿರುವ ವಿಶ್ವಾಸವನ್ನು ಉಳಿಸಬೇಕು ಎಂದು ಸಲಹೆ ನೀಡಿದರು. ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆ ವಹಿಸಿ, ತಮ್ಮ ಕ್ಷೇತ್ರದಲ್ಲಿ ಇಂತಹ ಉದ್ಯೋಗ ಮೇಳ ನಡೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದರು. ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ, ನವೋದ್ಯಮವನ್ನು ದೊಡ್ಡ ಮಟ್ಟಕ್ಕೆ ಬೆಳೆಸುವ ಮಾದರಿಯನ್ನು ಡಾ. ಎಂ. ಮೋಹನ ಆಳ್ವ ತೋರಿಸಿಕೊಟ್ಟಿದ್ದಾರೆ. ಸಮಾಜಮುಖಿ ಚಿಂತನೆ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕೊಡುಗೆ ಮಾದರಿಯಾಗಿದೆ ಎಂದರು. ಕರಾವಳಿ ಸಾಧಕರಿಗೆ ಸನ್ಮಾನ: ಬೆಳ್ತಂಗಡಿಯ ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್‌ನ ಶ್ರೀ ಕ್ಷೇತ್ರ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ಜನಾರ್ದನ, ಎಂಆರ್‌ಜಿ ಗ್ರೂಪ್‌ನ ಸಂಸ್ಥಾಪಕ ಹಾಗೂ ಅಧ್ಯಕ್ಷ ಡಾ. ಕೆ. ಪ್ರಕಾಶ್ ಶೆಟ್ಟಿ, ಭವಾನಿ ಗ್ರೂಪ್‌ನ ಸಂಸ್ಥಾಪಕ ಹಾಗೂ ಅಧ್ಯಕ್ಷ ಕುಸುಮಾಧರ ಡಿ. ಶೆಟ್ಟಿ, ಪ್ರೊವಿಟ್ ಫುಡ್ಸ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ವಿನ್ಸೆಂಟ್ ಕುಟಿನ್ಹಾ ಹಾಗೂ ಎಕ್ಸರ್ಟೀಸ್ ಕಾಂಟ್ರಾಕ್ಟಿಂಗ್ ಕಂಪನಿಯ ಸಹ-ಸಂಸ್ಥಾಪಕ ಮಹಮ್ಮದ್ ಆಶ್ಚಾಕ್ ಅವರನ್ನು ಸನ್ಮಾನಿಸಲಾಯಿತು. ಡಾ. ಎಂ. ಮೋಹನ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಬಾರಿ ಉದ್ಯೋಗ ಮೇಳದಲ್ಲಿ 350ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿದ್ದು, 26,300ಕ್ಕೂ ಅಧಿಕ ಉದ್ಯೋಗಾವಕಾಶಗಳನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದರು. ವೇಣುಗೋಪಾಲ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.