ಮೂಡುಬಿದಿರೆ: ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಜಗದೀಶ್ ಅವರು ಅಸೌಖ್ಯದಿಂದ ಶನಿವಾರ ಬೆಳಿಗ್ಗೆ ನಿಧನರಾದರು. ‘ಜಗ್ಗಣ್ಣ’ ಎಂದೇ ಪರಿಚಿತರಾಗಿದ್ದ ಅವರು ಪೋಸ್ಟ್ ಮಾರ್ಟಮ್ ಕಾರ್ಯದಲ್ಲಿ ಪರಿಣತಿ ಹೊಂದಿದ್ದರಿಂದ ‘ಪೋಸ್ಟ್ ಮಾರ್ಟಮ್ ಜಗ್ಗಣ್ಣ’ ಎಂದೇ ಹೆಸರು ಗಳಿಸಿದ್ದರು.

ಕಾಸರಗೋಡು ಮೂಲದ ಜಗದೀಶ್ ಅವರು ಮೂಡುಬಿದಿರೆ ಸರ್ಕಾರಿ ಆಸ್ಪತ್ರೆಯಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಸೇವಾವಧಿಯಲ್ಲಿ ಹಲವು ಮೃತದೇಹಗಳ ಪೋಸ್ಟ್ ಮಾರ್ಟಮ್ ಕಾರ್ಯದಲ್ಲಿ ಕರ್ತವ್ಯ ನಿರ್ವಹಿಸಿದ್ದರು.

ಆಸ್ಪತ್ರೆಯಿಂದ ಚಿಕಿತ್ಸೆ ಪಡೆದು ಮನೆಗೆ ಮರಳುತ್ತಿದ್ದ ಹಲವು ರೋಗಿಗಳ ಗಾಯಗಳನ್ನು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಸ್ವಚ್ಛಗೊಳಿಸುತ್ತಿದ್ದ ಅವರ ಸೇವಾ ಮನೋಭಾವ ಗಮನ ಸೆಳೆದಿತ್ತು. ಈ ಸೇವೆಯನ್ನು ಗುರುತಿಸಿದ ಹಲವು ಸಂಘ-ಸಂಸ್ಥೆಗಳು ಅವರನ್ನು ಸನ್ಮಾನಿಸಿದ್ದವು. ಪತ್ನಿ , ಪುತ್ರಿಯನ್ನು ಅಗಲಿದ್ದಾರೆ.