ಮೂಡುಬಿದಿರೆ: 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಮೂಡುಬಿದಿರೆ ತಾಲೂಕಿನಲ್ಲಿ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸುವ ಉದ್ದೇಶದಿಂದ ‘ಬೆದ್ರದಲ್ಲಿ ಡ್ರಗ್ಸ್ ಬೇಡ ಬ್ರೋ’ ಸ್ಟಿಕ್ಕರ್ ಅಭಿಯಾನ ಆ.14ರಂದು ನಡೆಯಲಿದೆ.
ಕಾನೂನು ಘಟಕ ಮೂಡುಬಿದಿರೆ ಹಾಗೂ ಟೀಮ್ ಬೆದ್ರ ವತಿಯಿಂದ ಆಯೋಜಿಸಿರುವ ಅಭಿಯಾನವು ಮೂಡುಬಿದಿರೆ ಪೊಲೀಸ್ ಠಾಣೆಯ ಸಹಯೋಗದಲ್ಲಿ ನಡೆಯಲಿದೆ. ಆ.14ರಂದು ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ನವಮಿ ಸಿಲ್ಕ್ ಎದುರಿನ ಸಮಾಜಮಂದಿರ ವಾಣಿಜ್ಯ ಕಟ್ಟಡದ ಬಳಿ ಅಭಿಯಾನಕ್ಕೆ ಚಾಲನೆ ನೀಡಲಾಗುವುದು.
ಮೂಡುಬಿದಿರೆ ತಾಲೂಕಿನಲ್ಲಿ ಮಾದಕ ವಸ್ತುಗಳ ಬಳಕೆಯ ವಿರುದ್ಧ ಜಾಗೃತಿ ಮೂಡಿಸುವುದು ಹಾಗೂ ಯುವಜನತೆಯಲ್ಲಿ ಮಾದಕ ವಸ್ತುಗಳಿಂದ ದೂರವಿರುವ ಕುರಿತು ಅರಿವು ಮೂಡಿಸುವುದು ಅಭಿಯಾನದ ಉದ್ದೇಶವಾಗಿದೆ.
ಅಭಿಯಾನದಲ್ಲಿ ಪೊಲೀಸ್ ಅಧಿಕಾರಿಗಳು, ವಿವಿಧ ಕ್ಷೇತ್ರಗಳ ಗಣ್ಯರು, ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವಜನರು ಕೈಜೋಡಿಸಲಿದ್ದಾರೆ. ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ‘ಡ್ರಗ್ಸ್ ಬೇಡ ಬ್ರೋ’ ಅಭಿಯಾನಕ್ಕೆ ಪ್ರೋತ್ಸಾಹ ನೀಡುವಂತೆ ಆಯೋಜಕರು ಮನವಿ ಮಾಡಿದ್ದಾರೆ.
ಕಾನೂನು ಘಟಕ ಮೂಡುಬಿದಿರೆಯ ಪದ್ಮಪ್ರಸಾದ್, ಮರ್ವಿನ್ ಲೋಬೊ ಹಾಗೂ ಟೀಮ್ ಬೆದ್ರದ ಸದಸ್ಯರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.