ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಪರೀತ ಮಳೆಯಿಂದ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಮಾನ್ಯ ಜಿಲ್ಲಾಧಿಕಾರಿಗಳು ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆಗಳನ್ನು ಘೋಷಿಸಿದ್ದರು. ಈ ರಜೆಯಿಂದ ಉಂಟಾದ ಬೋಧನಾ ಅವಧಿಗಳ ಕೊರತೆಯನ್ನು ಸರಿದೂಗಿಸಲು ಸೆಪ್ಟೆಂಬರ್ ಎರಡನೇ ವಾರದಿಂದ ಶಾಲೆಗಳಲ್ಲಿ ಹೊಂದಾಣಿಕೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಉಪನಿರ್ದೇಶಕರ ಕಛೇರಿ (ಆಡಳಿತ), ಶಾಲಾ ಶಿಕ್ಷಣ ಇಲಾಖೆ, ಮಂಗಳೂರು ಹೊರಡಿಸಿರುವ ಜ್ಞಾಪನದಂತೆ, ಮಂಗಳೂರು ಉತ್ತರ, ಮಂಗಳೂರು ದಕ್ಷಿಣ, ಬಂಟ್ವಾಳ ಮತ್ತು ಮೂಡುಬಿದಿರೆ ತಾಲೂಕುಗಳಿಗೆ ಒಟ್ಟು ಎಂಟು ಪೂರ್ಣ ದಿನಗಳು ಹಾಗೂ ಒಂದು ಅರ್ಧ ದಿನದ ರಜೆ ಘೋಷಿಸಲಾಗಿದೆ. ಬೆಳ್ತಂಗಡಿ, ಪುತ್ತೂರು ಮತ್ತು ಸುಳ್ಯ ವಲಯಗಳಿಗೆ ಒಟ್ಟು ಒಂಭತ್ತು ಪೂರ್ಣ ದಿನಗಳ ರಜೆ ಘೋಷಿಸಲಾಗಿದೆ.

ಈ ರಜಾ ದಿನಗಳಲ್ಲಿ ಕೊರತೆಯಾಗಿರುವ ಬೋಧನಾ ಅವಧಿಗಳನ್ನು ಸರಿದೂಗಿಸಲು ಆಗಸ್ಟ್ ತಿಂಗಳ ಮೂರನೇ ವಾರದಿಂದ ಶನಿವಾರ ಅಪರಾಹ್ನ ಪೂರ್ಣ ತರಗತಿಗಳನ್ನು ನಡೆಸಬೇಕು. ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಇತರ ದಿನಗಳಲ್ಲಿ ಹೆಚ್ಚುವರಿಯಾಗಿ ಸಂಜೆ ಒಂದು ಬೋಧನಾ ಅವಧಿ ನಡೆಸುವಂತೆ ಸೂಚಿಸಲಾಗಿದೆ. ಪ್ರತಿ ಶಾಲೆಯಲ್ಲಿ ಮಳೆ ರಜೆಗಳ ಲೆಕ್ಕಾಚಾರವನ್ನು ಇಟ್ಟುಕೊಂಡು, ಹೊಂದಾಣಿಕೆ ಮಾಡಿಕೊಳ್ಳಬೇಕಾದ ಬೋಧನಾ ಅವಧಿಗಳನ್ನು ಲೆಕ್ಕಹಾಕಬೇಕು. ಬಳಿಕ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಮತ್ತು ಎಸ್‌ಡಿಎಂಸಿ ಅವರೊಂದಿಗೆ ಚರ್ಚಿಸಿ ದಿನಗಳನ್ನು ನಿರ್ಧರಿಸಿ, ವೇಳಾಪಟ್ಟಿಯಲ್ಲಿ ದಾಖಲಿಸಬೇಕು. ಶೈಕ್ಷಣಿಕ ಮಾರ್ಗಸೂಚಿಯಂತೆ ಬೋಧನಾ ದಿನಗಳನ್ನು ಸರಿದೂಗಿಸಲು ಕ್ರಮ ಕೈಗೊಳ್ಳುವಂತೆ ಆದೇಶಿಸಲಾಗಿದೆ.