ಮೂಡುಬಿದಿರೆ: ವಿದ್ಯಾರ್ಥಿಗಳ ಬದುಕಿಗೆ ಮೌಲ್ಯಗಳೇ ನಿಜವಾದ ಮೈಲುಗಲ್ಲುಗಳಾಗಬೇಕು ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಟ್ರಸ್ಟಿ ವಿವೇಕ ಆಳ್ವ ಹೇಳಿದರು. ಮೂಡುಬಿದಿರೆಯ ಎಕ್ಸಲೆಂಟ್ ಪಿಯು ಕಾಲೇಜಿನಲ್ಲಿ ಎನ್‌ಸಿಸಿ, ಎನ್‌ಎಸ್‌ಎಸ್, ರೆಡ್‌ಕ್ರಾಸ್, ರೋವರ್ಸ್-ರೇಂಜರ್ಸ್, ಸಾಹಿತ್ಯ ಸಂಘ ಹಾಗೂ ಇಕೋ ಕ್ಲಬ್‌ಗಳ ಉದ್ಘಾಟನಾ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿ ಜೀವನ ಕೇವಲ ಅಂಕ ಗಳಿಕೆ ಮತ್ತು ಉದ್ಯೋಗದ ಸಿದ್ಧತೆಗೆ ಸೀಮಿತವಾಗದೆ, ಶಿಸ್ತು, ಸೇವೆ, ನಾಯಕತ್ವ ಹಾಗೂ ಮಾನವೀಯತೆಯನ್ನು ಮೈಗೂಡಿಸಿಕೊಳ್ಳುವ ಕಾಲಘಟ್ಟವಾಗಬೇಕು. ಮೇಲಿರುವವರೊಂದಿಗೆ ವಿಧೇಯತೆ, ಕೆಳಗಿನವರೊಂದಿಗೆ ಮಧುರ ಸಮಾನತೆ ಹಾಗೂ ಸಮಾನರೊಂದಿಗೆ ಸ್ನೇಹ ಬದುಕಿನ ದಾರಿದೀಪಗಳಾಗಬೇಕು ಎಂದು ವಿವೇಕ ಆಳ್ವ ಕಿವಿಮಾತು ಹೇಳಿದರು. ಗುರು-ಹಿರಿಯರ ಮೇಲಿನ ಗೌರವ ಹಾಗೂ ತ್ಯಾಗವನ್ನು ಸದಾ ಸ್ಮರಿಸಬೇಕು. ‘ಸೋಲು ಸಾವಲ್ಲ; ಸೋಲಿನ ಬಳಿಕವೂ ಎದ್ದು ನಿಲ್ಲದಿರುವುದೇ ನಿಜವಾದ ಸೋಲು’ ಎಂಬ ಸಕಾರಾತ್ಮಕ ಮನೋಭಾವವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಮಾತನಾಡಿ, ಅಂಕಗಳು ಮತ್ತು ಪ್ರಮಾಣಪತ್ರಗಳು ಸಾಮರ್ಥ್ಯವನ್ನು ಅಳೆಯಬಹುದೇ ಹೊರತು ವ್ಯಕ್ತಿತ್ವ ಹಾಗೂ ಮಾನವೀಯ ಮೌಲ್ಯಗಳನ್ನಲ್ಲ. ವಿದ್ಯಾರ್ಥಿಗಳನ್ನು ರೂಪಿಸುವ ಶಿಕ್ಷಣವು ತರಗತಿಯ ಹೊರಗಿನ ಚಟುವಟಿಕೆಗಳಿಂದಲೂ ಆರಂಭವಾಗುತ್ತದೆ ಎಂದರು.
ಎನ್‌ಸಿಸಿ ಶಿಸ್ತು, ಎನ್‌ಎಸ್‌ಎಸ್ ಸೇವೆ, ರೆಡ್‌ಕ್ರಾಸ್ ಮಾನವೀಯತೆ, ರೋವರ್ಸ್-ರೇಂಜರ್ಸ್ ಸಾಹಸ ಮತ್ತು ನಾಯಕತ್ವ, ಸಾಹಿತ್ಯ ಸಂಘ ಚಿಂತನೆ ಹಾಗೂ ಸಂವೇದನೆ ಮತ್ತು ಇಕೋ ಕ್ಲಬ್ ಪ್ರಕೃತಿಯೊಂದಿಗಿನ ಸಂಬಂಧವನ್ನು ಬೆಳೆಸುವಂತಾಗಬೇಕು ಎಂದು ಯುವರಾಜ್ ಜೈನ್ ಹೇಳಿದರು.
ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್, ವಿವಿಧ ಘಟಕಗಳ ಕನ್ವೀನರ್‌ಗಳಾದ ಲೆಫ್ಟಿನೆಂಟ್ ಮಹೇಂದ್ರಜೈನ್, ಪ್ರಶಾಂತ್ ಶೆಟ್ಟಿ, ಪ್ರದೀಪ್ ಕೆ.ಪಿ., ಸಂಧ್ಯಾಕುಮಾರಿ, ಡಾ. ವಾದಿರಾಜ ಕಲ್ಲೂರಾಯ, ಅಶೋಕ್ ಶೆಟ್ಟಿ ಹಾಗೂ ಅಶೋಕ ಎನ್ ಮತ್ತು ವಿದ್ಯಾರ್ಥಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಾಂಶುಪಾಲ ಪುಷ್ಪರಾಜ ಬಿ. ಸ್ವಾಗತಿಸಿದರು. ಉಪಪ್ರಾಂಶುಪಾಲ ಸುನಾದ್ ರಾಜ್ ಜೈನ್ ವಂದಿಸಿದರು. ಉಪನ್ಯಾಸಕಿ ವ್ಯಾಲೆಂಟಿನ ಮಿರಾಂಡಾ ನಿರೂಪಿಸಿದರು.