ಮೂಡುಬಿದಿರೆ: ಬೆಂಗಳೂರಿನ ಕರ್ನಾಟಕ ಅಥ್ಲೆಟಿಕ್ಸ್ ಸಂಸ್ಥೆ ವತಿಯಿಂದ ನಡೆದ ಕರ್ನಾಟಕ ರಾಜ್ಯ ಕಿರಿಯರ ಅಥ್ಲೆಟಿಕ್ಸ್ ಕ್ರೀಡಾಕೂಟ 2026ರಲ್ಲಿ ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್‌ನ ಕ್ರೀಡಾಪಟುಗಳು 15 ಚಿನ್ನ, 8 ಬೆಳ್ಳಿ ಹಾಗೂ 10 ಕಂಚು ಸೇರಿದಂತೆ ಒಟ್ಟು 33 ಪದಕಗಳನ್ನು ಗೆದ್ದುಕೊಂಡಿದ್ದು, ನಾಲ್ಕು ನೂತನ ಕೂಟ ದಾಖಲೆಗಳನ್ನು ನಿರ್ಮಿಸಿದ್ದಾರೆ.

14 ವರ್ಷ ವಯೋಮಿತಿಯ ಬಾಲಕರ ವಿಭಾಗದ ಟ್ರಯಥ್ಲಾನ್ ಸಿ ಸ್ಪರ್ಧೆಯಲ್ಲಿ ಸುಭಾಷ್, 16 ವರ್ಷ ವಯೋಮಿತಿಯ ಬಾಲಕರ 60 ಮೀಟರ್ ಓಟದಲ್ಲಿ ರಾಜು, 18 ವರ್ಷ ವಯೋಮಿತಿಯ ಬಾಲಕರ 100 ಮೀಟರ್ ಓಟದಲ್ಲಿ ಸಾಹಿಲ್ ಹಾಗೂ 18 ವರ್ಷ ವಯೋಮಿತಿಯ ಬಾಲಕಿಯರ 400 ಮೀಟರ್ ಓಟದಲ್ಲಿ ಬಾನವಿ ನೂತನ ಕೂಟ ದಾಖಲೆ ನಿರ್ಮಿಸಿದ್ದಾರೆ.

14 ವರ್ಷ ವಯೋಮಿತಿಯಲ್ಲಿ ಸುಭಾಷ್ ಟ್ರಯಥ್ಲಾನ್ ಸಿ ವಿಭಾಗದಲ್ಲಿ ಪ್ರಥಮ ಹಾಗೂ ಮೋಕ್ಷಿತ್ ಆರ್. ಗೌಡ ಟ್ರಯಥ್ಲಾನ್ ಬಿ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದರು.

16 ವರ್ಷ ವಯೋಮಿತಿಯಲ್ಲಿ ಕೌಶಿಕ್ ಪಿ. ಶೆಟ್ಟಿಗಾರ್ 80 ಮೀಟರ್ ಹರ್ಡಲ್ಸ್‌ನಲ್ಲಿ ಪ್ರಥಮ ಹಾಗೂ ಉದ್ದ ಜಿಗಿತದಲ್ಲಿ ತೃತೀಯ ಸ್ಥಾನ ಪಡೆದರು. ಹರ್ಷದ್ ಗೌಡ ಉದ್ದ ಜಿಗಿತದಲ್ಲಿ ದ್ವಿತೀಯ, ಆದರ್ಶ್ 60 ಮೀಟರ್‌ನಲ್ಲಿ ತೃತೀಯ, ರಾಜು 60 ಮೀಟರ್‌ನಲ್ಲಿ ಪ್ರಥಮ ಹಾಗೂ 80 ಮೀಟರ್ ಹರ್ಡಲ್ಸ್‌ನಲ್ಲಿ ದ್ವಿತೀಯ ಸ್ಥಾನ ಪಡೆದರು. ಅಮೂಲ್ಯ 80 ಮೀಟರ್ ಹರ್ಡಲ್ಸ್‌ನಲ್ಲಿ ತೃತೀಯ ಹಾಗೂ ಮೇಘಾ 600 ಮೀಟರ್‌ನಲ್ಲಿ ಪ್ರಥಮ ಸ್ಥಾನ ಗಳಿಸಿದರು.

18 ವರ್ಷ ವಯೋಮಿತಿಯಲ್ಲಿ ಸಮರ್ಥ್ 1000 ಮೀಟರ್‌ನಲ್ಲಿ, ಜಶ್ವಿನ್ ಎತ್ತರ ಜಿಗಿತದಲ್ಲಿ, ಸಾಹಿಲ್ 100 ಮೀಟರ್‌ನಲ್ಲಿ, ಹೆಚ್. ಮೈಲಾರಿ ಚಕ್ರ ಎಸೆತದಲ್ಲಿ, ಬಾನವಿ 400 ಮೀಟರ್‌ನಲ್ಲಿ, ನಾಗಿಣಿ 1000 ಮೀಟರ್‌ನಲ್ಲಿ ಹಾಗೂ ಭಾಗೀರಥಿ 3 ಕಿ.ಮೀ. ನಡಿಗೆಯಲ್ಲಿ ಪ್ರಥಮ ಸ್ಥಾನ ಪಡೆದರು. ಆಕಾಶ್ 110 ಮೀಟರ್ ಹರ್ಡಲ್ಸ್‌ನಲ್ಲಿ ದ್ವಿತೀಯ, ಧನುಷ್ ಚಂದ್ರ ಚಕ್ರ ಎಸೆತದಲ್ಲಿ ತೃತೀಯ, ಕೃಷ್ಣ ಜಾವೆಲಿನ್ ಎಸೆತದಲ್ಲಿ ತೃತೀಯ, ನವೀನ್ ಉದ್ದ ಜಿಗಿತದಲ್ಲಿ ತೃತೀಯ, ಬಾನವಿ 200 ಮೀಟರ್‌ನಲ್ಲಿ ತೃತೀಯ ಹಾಗೂ ಮಲ್ಲಮ್ಮ 3 ಕಿ.ಮೀ. ನಡಿಗೆಯಲ್ಲಿ ತೃತೀಯ ಸ್ಥಾನ ಪಡೆದರು.

20 ವರ್ಷ ವಯೋಮಿತಿಯಲ್ಲಿ ದಯಾನಂದ 400 ಮೀಟರ್‌ನಲ್ಲಿ, ನೊಯಲ್ ಆರ್.ಪಿ. ಉದ್ದ ಜಿಗಿತದಲ್ಲಿ, ರೀತುಶ್ರೀ 400 ಮೀಟರ್‌ನಲ್ಲಿ ಹಾಗೂ ಚರೀಷ್ಮಾ 3000 ಮೀಟರ್‌ನಲ್ಲಿ ಪ್ರಥಮ ಸ್ಥಾನ ಗಳಿಸಿದರು. ರೂಪೇಶ್ ಪೋಲ್ ವಾಲ್ಟ್‌ನಲ್ಲಿ, ಮಹಮ್ಮದ್ ಅಬ್ದುಲ್ ಹ್ಯಾಮರ್ ಎಸೆತದಲ್ಲಿ ಹಾಗೂ ನಿತಿನ್ ಚಕ್ರ ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದರು. ನಿರ್ಮಲಾ 100 ಮೀಟರ್ ಹರ್ಡಲ್ಸ್ ಮತ್ತು 400 ಮೀಟರ್ ಹರ್ಡಲ್ಸ್‌ನಲ್ಲಿ ತೃತೀಯ ಸ್ಥಾನ ಪಡೆದರೆ, ಚರೀಷ್ಮಾ 5000 ಮೀಟರ್‌ನಲ್ಲಿ ದ್ವಿತೀಯ ಸ್ಥಾನ ಪಡೆದರು.

ವಿಜೇತ ಕ್ರೀಡಾಪಟುಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಭಿನಂದನೆ ಸಲ್ಲಿಸಿದ್ದಾರೆ.