ಮೂಡುಬಿದಿರೆ: ಜವನೆರ್ ಬೆದ್ರ ಫೌಂಡೇಶನ್ ಹಾಗೂ ಅದರ ಮಹಿಳಾ ಘಟಕ ‘ಅಬ್ಬಕ್ಕ ಬ್ರಿಗೇಡ್’ ಜಂಟಿ ಆಶ್ರಯದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಚೌಟ ಅರಮನೆಯ ಮುಂಭಾಗದ ಉದ್ಯಾನವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತದ ಪ್ರಥಮ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ಹಾಗೂ ಪೋರ್ಚುಗೀಸರ ವಿರುದ್ಧ ಹೋರಾಡಿದ ವೀರರಾಣಿ ಅಬ್ಬಕ್ಕ ಚೌಟ ಅವರಿಗೆ ಗೌರವ ನಮನ ಸಲ್ಲಿಸಲಾಯಿತು. ಅರಮನೆಯ ಕುಲದೀಪ್ ಎಂ. ಧ್ವಜಾರೋಹಣ ನೆರವೇರಿಸಿ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಿದ ಮಹನೀಯರು ಹಾಗೂ ರಾಣಿ ಅಬ್ಬಕ್ಕ ಅವರ ಶೌರ್ಯ, ಸ್ವಾಭಿಮಾನ ಮತ್ತು ದೇಶಪ್ರೇಮದ ಇತಿಹಾಸ ಪ್ರತಿಯೊಬ್ಬರಿಗೂ ಪ್ರೇರಣೆಯಾಗಬೇಕು ಎಂದು ಹೇಳಿದರು.
ಜವನೆರ್ ಬೆದ್ರ ಫೌಂಡೇಶನ್‌ನ ಸಂಸ್ಥಾಪಕ ಅಮರ್ ಕೋಟೆ ಮಾತನಾಡಿ, ಒಂಬತ್ತು ವರ್ಷಗಳ ಹಿಂದೆ ಅರಮನೆಯಲ್ಲಿಯೇ ಆರಂಭಗೊಂಡ ರಾಣಿ ಅಬ್ಬಕ್ಕ ಸ್ಮರಣೆಯ ಕಾರ್ಯಕ್ರಮ ಹಾಗೂ ಅವರ ಎರಡು ಪ್ರತಿಮೆಗಳ ಸ್ಥಾಪನೆಯ ಮೂಲಕ ಅಬ್ಬಕ್ಕಳ ಕೀರ್ತಿಯನ್ನು ಎಲ್ಲೆಡೆ ಪಸರಿಸುವ ಕಾಯಕದಲ್ಲಿ ಸಂಸ್ಥೆ ತೊಡಗಿಸಿಕೊಂಡಿರುವುದು ಹೆಮ್ಮೆಯ ವಿಷಯ ಎಂದರು.
ಕಾರ್ಯಕ್ರಮಕ್ಕೆ ನಿರಂತರ ಸಹಕಾರ ನೀಡುತ್ತಿರುವ ಚೌಟ ಅರಮನೆಯ ಕುಟುಂಬಕ್ಕೆ ವಂದಿಸಿದ ಅಮರ್ ಕೋಟೆ, ವೀರರಾಣಿ ಅಬ್ಬಕ್ಕ ಅವರ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಹೇಳಿದರು
ಜವನೆರ್ ಬೆದ್ರ ಫೌಂಡೇಶನ್‌ನ ಪ್ರಧಾನ ಕಾರ್ಯದರ್ಶಿ ದಿನೇಶ್ ನಾಯಕ್, ಉಪಾಧ್ಯಕ್ಷ ನಾರಾಯಣ ಪದುಮಲೆ, ಸಂಚಾಲಕ ರಂಜಿತ್ ಶೆಟ್ಟಿ, ಅಬ್ಬಕ್ಕ ಬ್ರಿಗೇಡ್‌ನ ಸಂಚಾಲಕಿ ಸವಿತಾ ಉದಯ್, ಕಾರ್ಯದರ್ಶಿ ರಮ್ಯಾ ನಾಯಕ್ ಪ್ರತೀಶ್, ಆಭಿಲಾಶ್, ಸುಮಂತ್, ಅದಿಶ್, ಅಬ್ಬಕ್ಕ ಬ್ರಿಗೇಡ್‌ನ ಸದಸ್ಯರಾದ ಸಹನ ನಾಯಕ್, ಪ್ರೇಮ ಚಂದ್ರಶೇಖರ್, ಶಾಂತ, ಸೌಮ್ಯ ಸೇರಿದಂತೆ ಫೌಂಡೇಶನ್ ಹಾಗೂ ಅಬ್ಬಕ್ಕ ಬ್ರಿಗೇಡ್‌ನ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸಂದೀಪ್ ಕೆಲ್ಲಪುಟ್ಟಿಗೆ ನಿರೂಪಿಸಿ ನಿರ್ವಹಿಸಿದರು. ಫೌಂಡೇಶನ್ ಹಾಗೂ ಅಬ್ಬಕ್ಕ ಬ್ರಿಗೇಡ್‌ನ ಪದಾಧಿಕಾರಿಗಳು ಮತ್ತು ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಾಣಿ ಅಬ್ಬಕ್ಕ ಅವರ ಶೌರ್ಯವನ್ನು ಸ್ಮರಿಸಿದರು.