ಮೂಡುಬಿದಿರೆ: ಎಕ್ಸಲೆಂಟ್ ಸಿಬಿಎಸ್‌ಇ ಶಾಲೆಯ ಆವರಣದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕರ್ನಾಟಕ ಸರ್ಕಾರದ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಧ್ವಜಾರೋಹಣ ನೆರವೇರಿಸಿ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೆ. ಅಭಯಚಂದ್ರ ಜೈನ್, “ಸ್ವಾತಂತ್ರ್ಯ ಹೋರಾಟಗಾರರು ದೇಶಕ್ಕೆ ಸ್ವಾತಂತ್ರ್ಯದ ಬೆಳಕನ್ನು ತಂದರೆ, ಶಿಕ್ಷಕ ಬಂಧುಗಳು ಜ್ಞಾನವೆಂಬ ಬೆಳಕಿನಿಂದ ದೇಶದ ಭವಿಷ್ಯವನ್ನು ರೂಪಿಸುತ್ತಿದ್ದಾರೆ” ಎಂದು ಅಭಿಪ್ರಾಯಪಟ್ಟರು. ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಮಾತನಾಡಿ, ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಮುಖ್ಯ ಆಶಯ ‘ಯುವಶಕ್ತಿ’ಯಾಗಿದ್ದು, ಯುವಶಕ್ತಿಯ ಸದ್ಬಳಕೆಯೇ ದೇಶದ ಪ್ರಗತಿಯ ಮೂಲಮಂತ್ರವಾಗಿದೆ. ವಿದ್ಯಾರ್ಥಿಗಳು ಜ್ಞಾನ, ಶಿಸ್ತು, ದೇಶಪ್ರೇಮ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಮೈಗೂಡಿಸಿಕೊಂಡು ನವಭಾರತ ನಿರ್ಮಾಣದಲ್ಲಿ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ‘ಮನೋರಮ’ ಮಾಸಿಕ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ಶಾಲಾ ಸಭಾಂಗಣದಲ್ಲಿ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳು, ನೃತ್ಯ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಎಕ್ಸಲೆಂಟ್ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್, ಆಡಳಿತ ನಿರ್ದೇಶಕ ಬಿ. ಪಿ. ಸಂಪತ್ ಕುಮಾರ್, ಸಿಬಿಎಸ್‌ಇ ಶಾಲೆಯ ಪ್ರಾಂಶುಪಾಲ ಪ್ರಸಾದ್ ಹಾಗೂ ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲ ತೇಜಸ್ವಿ ಭಟ್ ಉಪಸ್ಥಿತರಿದ್ದರು. ಶಾಲಾ ನಾಯಕಿ ಪೂರ್ವಿ ಕಾರ್ಯಕ್ರಮ ನಿರೂಪಿಸಿದರು. ಚಾರ್ವಿ ಸ್ವಾಗತಿಸಿದರು. ಅರವ್ ಕಿರಣ್ ವಂದಿಸಿದರು.