ಮೂಡುಬಿದಿರೆ: ಕಲ್ಲಬೆಟ್ಟುವಿನ ನ್ಯೂ ವೈಬ್ರೆಂಟ್ ಪಿಯು ಕಾಲೇಜಿನಲ್ಲಿ 80ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಮಂಗಳೂರಿನ ನಮ್ಮ ಕುಡ್ಲ ಬಿಸಿನೆಸ್ ಟಾನಿಕ್‌ನ ಮುಖ್ಯ ಸಂಪಾದಕ ಹಾಗೂ ನವದೆಹಲಿಯ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ICAI) ಮಾಸ್ಟರ್ ಟ್ರೈನರ್ ಸಿಎ ಎಸ್.ಎಸ್. ನಾಯಕ್ ಧ್ವಜಾರೋಹಣ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, ಭಾರತವು ಹಲವು ಜಾತಿ, ಭಾಷೆ, ಆಚಾರ-ವಿಚಾರ ಮತ್ತು ಕಟ್ಟುಪಾಡುಗಳನ್ನು ಹೊಂದಿರುವ ದೇಶವಾಗಿದ್ದರೂ, ಪ್ರತಿಯೊಬ್ಬರಲ್ಲೂ ಪ್ರಥಮವಾಗಿ ನಾವೆಲ್ಲರೂ ಭಾರತೀಯರು ಎಂಬ ಭಾವನೆ ಇರಬೇಕು ಎಂದರು.

ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವ ಭಾರತದಲ್ಲಿ ಬದುಕು ಕಟ್ಟಿಕೊಂಡಿರುವ ನಾವು ದೇಶಕ್ಕೆ ಋಣಿಯಾಗಿರಬೇಕು. ಶ್ರೇಷ್ಠ ಸಂಪ್ರದಾಯ ಮತ್ತು ಸಂಸ್ಕೃತಿಯಿಂದ ಪ್ರಪಂಚದ ಇತರ ದೇಶಗಳ ಎದುರು ಭಾರತವು ಶ್ರೀಮಂತ ರಾಷ್ಟ್ರವಾಗಿ ಗುರುತಿಸಿಕೊಂಡಿದೆ. ‘ವಸುದೈವ ಕುಟುಂಬಕಂ’ ಎಂಬ ತತ್ವದ ಮೂಲಕ ಇಡೀ ಪ್ರಪಂಚವನ್ನೇ ಕುಟುಂಬವೆಂದು ಭಾವಿಸುವ ದೇಶ ನಮ್ಮದು ಎಂಬುದು ಹೆಮ್ಮೆ ಎಂದರು.

ಯುವಜನತೆ ರಾಷ್ಟ್ರದ ಶಕ್ತಿ. ಕಾಲೇಜಿನಲ್ಲಿ ಕಲಿಯುವ ವಿದ್ಯಾರ್ಥಿಗಳು ಉದ್ಯೋಗದ ನಿಮಿತ್ತ ಬೇರೆ ದೇಶಗಳಿಗೆ ತೆರಳುವುದಕ್ಕಿಂತ, ದೇಶದಲ್ಲಿರುವ ವಿಫುಲ ಅವಕಾಶಗಳನ್ನು ಬಳಸಿಕೊಂಡು ತಮ್ಮ ಅಮೂಲ್ಯ ಸೇವೆಯನ್ನು ಭಾರತಕ್ಕೆ ನೀಡುವ ಮೂಲಕ ದೇಶಪ್ರೇಮವನ್ನು ಪ್ರದರ್ಶಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಟ್ರಸ್ಟಿ ಹಾಗೂ ಪ್ರಾಂಶುಪಾಲ ಡಾ. ಎಸ್. ಎನ್. ವೆಂಕಟೇಶ್ ನಾಯಕ್ ವಹಿಸಿದ್ದರು. ಮಾಜಿ ಶಾಸಕ ಅಭಯಚಂದ್ರ ಜೈನ್, ಮೂಡುಬಿದಿರೆಯ ಧನಲಕ್ಷಿ ಕ್ಯಾಶೂಸ್‌ನ ವ್ಯವಸ್ಥಾಪಕ ನಿರ್ದೇಶಕ ಶ್ರೀಪತಿ ಭಟ್, ಕಾಲೇಜಿನ ಟ್ರಸ್ಟಿಗಳಾದ ಸುಭಾಷ್ ಝಾ, ಡಾ. ಶರತ್ ಗೋರೆ, ಚಂದ್ರಶೇಖರ ರಾಜೇ ಅರಸ್, ಮೆಹಬೂಬ್ ಬಾಷಾ, ಯೋಗೇಶ್ ಬೆಡೆಕರ್ ಹಾಗೂ ಆಡಳಿತಾಧಿಕಾರಿ ಅರುಣ್ ಡಿಸಿಲ್ವ ಉಪಸ್ಥಿತರಿದ್ದರು.

ಆಂಗ್ಲ ಭಾಷಾ ಉಪನ್ಯಾಸಕ ಸತೀಶ್ ಬಂಗೇರ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿನಿ ಬ್ರಿತಿ ಅರಸ್ ಸ್ವಾಗತಿಸಿದರು. ತಿಶಾನ್ ಪಣಿಯಾಲ್ ವಂದಿಸಿದರು. ದೇವಾಂಶ್ ಬಗರಿಯಾ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳು ಹಾಗೂ ಕಾಲೇಜಿನ ಸಿಬ್ಬಂದಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.