ಮೂಡುಬಿದಿರೆ: ಸ್ವಾತಂತ್ರ್ಯವೆಂದರೆ ನಮಗೆ ಇಷ್ಟ ಬಂದಂತೆ ಬದುಕುವ ಹಕ್ಕು ಮಾತ್ರವಲ್ಲ; ದೇಶ, ಸಂವಿಧಾನ, ಸಮಾಜ ಹಾಗೂ ಭವಿಷ್ಯದ ಪೀಳಿಗೆಯೆಡೆಗೆ ಕರ್ತವ್ಯ ಮತ್ತು ಜವಾಬ್ದಾರಿಯನ್ನೂ ಒಳಗೊಂಡಿದೆ ಎಂದು ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಹಾಗೂ ನಿವೃತ್ತ ಭಾರತೀಯ ಸೇನಾ ಅಧಿಕಾರಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದರು. ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಶನಿವಾರ ಕೆ.ವಿ. ಸುಬ್ಬಣ್ಣ ಬಯಲು ರಂಗಮಂದಿರದಲ್ಲಿ ನಡೆದ 80ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
15 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು, ಶಿಕ್ಷಣ ಸಂಸ್ಥೆಯ ಸಿಬ್ಬಂದಿ, ಪಾಲಕರು ಹಾಗೂ ಊರಿನ ಗಣ್ಯರನ್ನು ಉದ್ದೇಶಿಸಿ ಮಾತನಾಡಿದ ಕ್ಯಾಪ್ಟನ್ ಕಾರ್ಣಿಕ್, ಭಾರತದ ಸ್ವಾತಂತ್ರ್ಯ ಹೋರಾಟ, ಸ್ವಾತಂತ್ರ್ಯೋತ್ತರ ಭಾರತದ ಸಾಧನೆ, ರಾಷ್ಟ್ರೀಯ ಭದ್ರತೆ, ಪ್ರಜಾಪ್ರಭುತ್ವ, ಸಂವಿಧಾನ, ವೈವಿಧ್ಯತೆಯಲ್ಲಿ ಏಕತೆ ಹಾಗೂ ದೇಶದ ಭವಿಷ್ಯ ನಿರ್ಮಾಣದಲ್ಲಿ ಯುವಜನರ ಪಾತ್ರದ ಕುರಿತು ವಿವರಿಸಿದರು.
ತ್ಯಾಗದ ಫಲವೇ ಸ್ವಾತಂತ್ರ್ಯ ಭಾರತದ ಸ್ವಾತಂತ್ರ್ಯ ಒಂದು ದಿನದಲ್ಲಿ ದೊರೆತದ್ದಲ್ಲ. ಅನೇಕ ತಲೆಮಾರುಗಳ ತ್ಯಾಗ, ಹೋರಾಟ, ನೋವು ಮತ್ತು ಅಚಲ ಸಂಕಲ್ಪದ ಫಲವಾಗಿ ಸ್ವಾತಂತ್ರ್ಯ ದೊರೆತಿದೆ. ಸ್ವಾತಂತ್ರ್ಯ ಪಡೆದ ಸಂದರ್ಭದಲ್ಲಿ ಭಾರತ ಬಡತನ, ಅನಕ್ಷರತೆ, ಮೂಲಸೌಕರ್ಯಗಳ ಕೊರತೆ ಹಾಗೂ ಸೀಮಿತ ಕೈಗಾರಿಕಾ ಸಾಮರ್ಥ್ಯದಂತಹ ಹಲವು ಸವಾಲುಗಳನ್ನು ಎದುರಿಸಿತ್ತು. ಬಳಿಕದ ತಲೆಮಾರುಗಳು ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಕೈಗಾರಿಕೆಗಳು, ವೈಜ್ಞಾನಿಕ ಸಂಸ್ಥೆಗಳು ಹಾಗೂ ಪ್ರಜಾಸತ್ತಾತ್ಮಕ ವ್ಯವಸ್ಥೆಗಳನ್ನು ನಿರ್ಮಿಸುವ ಮೂಲಕ ದೇಶದ ಪರಿವರ್ತನೆಗೆ ಭದ್ರ ಬುನಾದಿ ಹಾಕಿವೆ ಎಂದು ಹೇಳಿದರು. ಭಾರತದ ಶಕ್ತಿ ಅದರ ವೈವಿಧ್ಯತೆಯಲ್ಲಿರುವ ಏಕತೆಯಲ್ಲಿ ಅಡಗಿದೆ. ಭಾಷೆ, ಸಂಸ್ಕೃತಿ, ಸಂಪ್ರದಾಯ, ಧರ್ಮ ಹಾಗೂ ಜೀವನಶೈಲಿಗಳಲ್ಲಿ ವೈವಿಧ್ಯವಿದ್ದರೂ ಭಾರತೀಯತೆಯ ಭಾವನೆ ನಮ್ಮನ್ನು ಒಗ್ಗೂಡಿಸುತ್ತದೆ. ಏಕತೆ ಎಂದರೆ ಏಕರೂಪತೆಯಲ್ಲ. ಭಿನ್ನಾಭಿಪ್ರಾಯಗಳು ವಿಭಜನೆಗೆ ಕಾರಣವಾಗದಂತೆ ಯುವಜನತೆ ಸಾಮರಸ್ಯವನ್ನು ಬೆಳೆಸಬೇಕು ಎಂದು ಕರೆ ನೀಡಿದರು.
2,550 ವಿದ್ಯಾರ್ಥಿಗಳಿಂದ ರಾಷ್ಟ್ರಧ್ವಜದ ವಿನ್ಯಾಸ ಸ್ವಾತಂತ್ರ್ಯ ದಿನಾಚರಣೆಯ ಪ್ರಮುಖ ಆಕರ್ಷಣೆಯಾಗಿ 2,550 ವಿದ್ಯಾರ್ಥಿಗಳು ಕೇಸರಿ, ಬಿಳಿ ಹಾಗೂ ಹಸಿರು ಬಣ್ಣಗಳ ಸಂಯೋಜನೆಯ ಮೂಲಕ ಮೈದಾನದಲ್ಲಿ ವಿಶಾಲವಾದ ರಾಷ್ಟ್ರಧ್ವಜದ ಚಿತ್ರಣ ಮೂಡಿಸಿದರು. 8,350 ವಿದ್ಯಾರ್ಥಿಗಳು ಆಕಾಶ ನೀಲಿ ಬಣ್ಣದ ಟಿ-ಶರ್ಟ್ ಧರಿಸಿ ನಿಂತರೆ, 1,935 ವಿದ್ಯಾರ್ಥಿಗಳು ಮೈದಾನದ ಸುತ್ತಲಿನ ಗಡಿಭಾಗವನ್ನು ಆವರಿಸುವಂತೆ ಶಿಸ್ತಿನಿಂದ ಸಾಲಾಗಿ ನಿಂತು ಕೇಸರಿ, ಬಿಳಿ ಹಾಗೂ ಹಸಿರು ಬಣ್ಣಗಳ ಸಮನ್ವಯದಲ್ಲಿ ತ್ರಿವರ್ಣದ ವಿನ್ಯಾಸ ರೂಪಿಸಿದರು.
ತ್ರಿವರ್ಣದ ಬ್ಲಾಸ್ಟರ್‌ಗಳು ಮತ್ತು ಬ್ಲೋವರ್‌ಗಳು ಕಾರ್ಯಕ್ರಮದ ದೃಶ್ಯ ವೈಭವವನ್ನು ಹೆಚ್ಚಿಸಿದವು. ಆವರಣದಲ್ಲಿದ್ದ ಸಿಂಹಗಳು ಹಾಗೂ ಸಿಲಿಂಡರ್ ಆಕಾರದ ಕಂಬಗಳಿಗೆ ತ್ರಿವರ್ಣದ ಬಣ್ಣಗಳ ಅಲಂಕಾರ ಮಾಡಲಾಗಿತ್ತು. ಕೇಸರಿ, ಬಿಳಿ ಹಾಗೂ ಹಸಿರು ಬಣ್ಣದ ಧಿರಿಸಿನಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಧ್ವಜವನ್ನು ಅಲೆಯಂತೆ ಬೀಸಿದ ದೃಶ್ಯ ಗಮನ ಸೆಳೆಯಿತು.
ಅಜಯ್ ವಾರಿಯರ್ ತಂಡದಿಂದ ಸಂಗೀತ ಕಾರ್ಯಕ್ರಮ ಅಜಯ್ ವಾರಿಯರ್ ತಂಡದ ವತಿಯಿಂದ ವಿಶೇಷ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜನಪ್ರಿಯ ದೇಶಭಕ್ತಿಗೀತೆಗಳು, ಸುಮಧುರ ಸಂಗೀತ ಹಾಗೂ ಗಾಯನದ ಮೂಲಕ ಕಲಾವಿದರು ವಿದ್ಯಾರ್ಥಿಗಳನ್ನು ರಂಜಿಸಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಟ್ರಸ್ಟಿಗಳಾದ ವಿವೇಕ್ ಆಳ್ವ, ಡಾ. ವಿನಯ ಆಳ್ವ, ಆಡಳಿತ ಮಂಡಳಿಯ ಬಾಲಕೃಷ್ಣ ಆಳ್ವ, ಡಾ. ಹನ ಶೆಟ್ಟಿ, ಡಾ. ಗ್ರೀಷ್ಮಾ ಆಳ್ವ ಇದ್ದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿವಿಧ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರುಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ಪಾಲಕರು ಹಾಗೂ ಊರಿನ ಗಣ್ಯರು ಭಾಗವಹಿಸಿದ್ದರು. ಉಪನ್ಯಾಸಕರಾದ ವೇಣುಗೋಪಾಲ ಕೆ. ಶೆಟ್ಟಿ ಹಾಗೂ ಡಾ. ರಾಜೇಶ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ಪರೇಡ್ ಕಮಾಂಡರ್ ಆಗಿ ಎನ್‌ಸಿಸಿ ಕೆಡೆಟ್ ಕ್ಯಾಪ್ಟನ್ ಯದುನಂದನ್ ಹಾಗೂ ಗೌರವ ವಂದನೆಯನ್ನು ಪಿಒ ಕೆಡೆಟ್ ಹಾರ್ದಿಕ್ ಹರ್ಷ ಶೆಟ್ಟಿ ನೆರವೇರಿಸಿದರು.