ಕಾರ್ಕಳ: ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಮಾಜಿ ಸೈನಿಕ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಸದಾಶಿವ ಪ್ರಭು ಧ್ವಜಾರೋಹಣ ನೆರವೇರಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನದ ಫಲವಾಗಿ ದೇಶದ ಜನರು ಇಂದು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ಇಂದಿನ ಪೀಳಿಗೆ ತಮ್ಮ ಜವಾಬ್ದಾರಿಯನ್ನು ಅರಿತು ದೇಶದ ಪ್ರಗತಿಗೆ ಕೊಡುಗೆ ನೀಡಬೇಕು. ಗಡಿ ಕಾಯುವ ಸೈನಿಕರ ಸೇವೆಯಿಂದ ದೇಶದ ಜನರು ಸುರಕ್ಷಿತವಾಗಿ ಜೀವನ ನಡೆಸಲು ಸಾಧ್ಯವಾಗಿದೆ ಎಂದು ಸದಾಶಿವ ಪ್ರಭು ಹೇಳಿದರು.

ಪ್ರಾಮಾಣಿಕತೆ, ನಿಷ್ಠೆ, ಶಿಸ್ತು ಮತ್ತು ಶ್ರದ್ಧೆಯಿಂದ ಕಾರ್ಯನಿರ್ವಹಿಸುವ ಮೂಲಕ ಪ್ರತಿಯೊಬ್ಬರೂ ತಮ್ಮ ಕ್ಷೇತ್ರದಲ್ಲಿ ಕೊಡುಗೆ ನೀಡಬೇಕು. ಯುವಜನತೆ ಮಾದಕ ವಸ್ತುಗಳಿಂದ ದೂರವಿದ್ದು, ಸಾಮಾಜಿಕ ಮಾಧ್ಯಮಗಳನ್ನು ಧನಾತ್ಮಕವಾಗಿ ಬಳಸಿಕೊಂಡರೆ ದೇಶವು ಮತ್ತಷ್ಟು ಪ್ರಗತಿ ಸಾಧಿಸಲು ಸಾಧ್ಯ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಂಸ್ಥಾಪಕರಾದ ವಿದ್ವಾನ್ ಗಣಪತಿ ಭಟ್, ಅಶ್ವತ್ ಎಸ್. ಎಲ್., ಆದರ್ಶ ಎಂ.ಕೆ. ಹಾಗೂ ಗಣಪತಿ ಭಟ್ ಕೆ. ಎಸ್. ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಆಂಗ್ಲ ಭಾಷಾ ಉಪನ್ಯಾಸಕ ರಾಜೇಶ್ ಶೆಟ್ಟಿ ನಡೆಸಿಕೊಟ್ಟರು. ಉಪನ್ಯಾಸಕ ವರ್ಗ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಧ್ವಜಾರೋಹಣ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಧ್ವಜಾರೋಹಣದ ಬಳಿಕ ಕರಾವಳಿಯ ಪ್ರಸಿದ್ಧ ಗಾಯಕರಿಂದ ದೇಶಭಕ್ತಿಯನ್ನು ಪಸರಿಸುವ ‘ಕ್ರಿಯೇಟಿವ್ ಸವಿಗಾನ’ ಸಂಗೀತ ಕಾರ್ಯಕ್ರಮ ನಡೆಯಿತು.