ಮೂಡುಬಿದಿರೆ: ಕಡಲಕೆರೆಯ ಪ್ರೇರಣಾ ಶಾಲೆಯಲ್ಲಿ ಭಾರತದ 80ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಖ್ಯಾತ ಲೆಕ್ಕ ಪರಿಶೋಧಕ ಬಾಲಕೃಷ್ಣ ಭಟ್ ಧ್ವಜಾರೋಹಣ ನೆರವೇರಿಸಿ, ರಾಷ್ಟ್ರಭಕ್ತಿ ಮತ್ತು ಸ್ವಾವಲಂಬನೆಯ ಮಹತ್ವವನ್ನು ತಿಳಿಸಿದರು.
ಮೂಡುಬಿದಿರೆ: ಕಡಲಕೆರೆಯ ಪ್ರೇರಣಾ ಶಾಲೆಯಲ್ಲಿ ಭಾರತದ 80ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಖ್ಯಾತ ಲೆಕ್ಕ ಪರಿಶೋಧಕ ಬಾಲಕೃಷ್ಣ ಭಟ್ ಧ್ವಜಾರೋಹಣ ನೆರವೇರಿಸಿ, ಧ್ವಜಕ್ಕೆ ಗೌರವ ಸಲ್ಲಿಸಿದರು. ವಂದೇ ಮಾತರಂ ಗೀತೆ ಹಾಡಿದ ಬಳಿಕ ವಿದ್ಯಾರ್ಥಿಗಳಿಂದ ಘೋಷ್ ಸಹಿತ ವಿವಿಧ ವ್ಯಾಯಾಮ ಪ್ರದರ್ಶನ ನಡೆಯಿತು. ನಂತರ ರಾಷ್ಟ್ರಗೀತೆ ಹಾಡಲಾಯಿತು.
ದೀಪ ಪ್ರಜ್ವಲನೆಯ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದ ಬಾಲಕೃಷ್ಣ ಭಟ್, ಸ್ವಾತಂತ್ರ್ಯ ಎಂದರೆ ತನ್ನ ಕೆಲಸವನ್ನು ತಾನೇ ಮಾಡುವುದು ಎಂಬ ಅರ್ಥವಿದೆ. ಶ್ರೀಕೃಷ್ಣನು ಭಗವದ್ಗೀತೆಯಲ್ಲಿ, ತನ್ನ ಉದ್ಧಾರಕ್ಕೆ ತಾನೇ ಪರಿಶ್ರಮ ಪಡಬೇಕು ಎಂದು ಹೇಳಿರುವುದರ ಅರ್ಥವೂ ಇದೇ ಆಗಿದೆ ಎಂದು ತಿಳಿಸಿದರು. ಬೇರೆಯವರನ್ನು ಕೀಳಾಗಿ ಬೈಯುವುದು ಹಾಗೂ ಸಕಾರಣವಲ್ಲದ ಪ್ರತಿಭಟನೆ ಮಾಡುವುದು ಸ್ವಾತಂತ್ರ್ಯವಲ್ಲ. ರಾಷ್ಟ್ರಭಕ್ತಿಯು ನಮ್ಮೆಲ್ಲರ ಆದ್ಯತೆಯಾಗಬೇಕು ಎಂದು ಬಾಲಕೃಷ್ಣ ಭಟ್ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೇರಣಾ ಶಾಲೆಯ ಸಂಚಾಲಕ ಎಂ. ಶಾಂತರಾಮ ಕುಡ್ವ ಮಾತನಾಡಿ, ಭಾರತದ ಸಾಂಬಾರ ಪದಾರ್ಥಗಳ ಆಕರ್ಷಣೆಯಿಂದ ತಕ್ಕಡಿ ಹಾಗೂ ತೂಕದ ಕಲ್ಲು ಹಿಡಿದು ವ್ಯಾಪಾರಕ್ಕಾಗಿ ಬಂದ ಬ್ರಿಟಿಷರು, ಭಾರತೀಯ ರಾಜರುಗಳಲ್ಲಿ ಒಗ್ಗಟ್ಟು ಇಲ್ಲದಿರುವುದರ ಲಾಭ ಪಡೆದು ಭಾರತದ ಆಳ್ವಿಕೆಯನ್ನು ತಮ್ಮ ವಶಕ್ಕೆ ಪಡೆದರು ಎಂದು ಹೇಳಿದರು.
ಗಾಂಧೀಜಿ, ನೆಹರೂ, ಪಟೇಲ್, ಸುಭಾಷ್ ಚಂದ್ರ ಬೋಸ್, ಗೋಖಲೆ, ಕ್ರಾಂತಿವೀರರಾದ ಖುದಿರಾಮ ಬೋಸ್, ಭಗತ್ ಸಿಂಗ್, ಅಜಾದ್ ಸೇರಿದಂತೆ ಲಕ್ಷಾಂತರ ದೇಶಭಕ್ತರ ಹೋರಾಟ ಹಾಗೂ ಬಲಿದಾನದ ಮೂಲಕ ನಾವು ನಮ್ಮ ದೇಶವನ್ನು ಮರಳಿ ಪಡೆದೆವು ಎಂದು ಎಂ. ಶಾಂತರಾಮ ಕುಡ್ವ ಹೇಳಿದರು.
ಶಾಲಾ ಮುಖ್ಯ ಶಿಕ್ಷಕಿ ವತ್ಸಲಾ ರಾಜೇಶ್ ಅತಿಥಿಗಳನ್ನು ಸ್ವಾಗತಿಸಿದರು. ಸೇವಾಂಜಲಿ ಎಜುಕೇಶನಲ್ ಟ್ರಸ್ಟ್ ಮೂಡುಬಿದಿರೆಯ ಅಧ್ಯಕ್ಷ ರಾಜೇಶ್ ಬಂಗೇರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಾಲಾ ಶಿಕ್ಷಕಿ ಮಯೂರಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಶಶಿಕಲಾ ವಂದಿಸಿದರು.
ಟ್ರಸ್ಟ್‌ನ ಕೋಶಾಧಿಕಾರಿ ಎಸ್.ಎನ್.ಬೋರ್ಕರ್, ಸದಸ್ಯರಾದ ಮಂಜುನಾಥ ಶೆಟ್ಟಿ, ಡಾ.ಆನಂದ ಕಾರ್ಲ, ಎಲ್ಲ ಶಿಕ್ಷಕ-ಶಿಕ್ಷಕಿಯರು, ಶಿಕ್ಷಕೇತರ ಸಿಬ್ಬಂದಿ, ಶಾಲಾ ಹಳೆ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳ ಪೋಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.