ಮೂಡುಬಿದಿರೆ: ಅಖಂಡ ಭಾರತ ಸಂಕಲ್ಪ ದಿನದ ಪ್ರಯುಕ್ತ ಮೂಡುಬಿದಿರೆ ತಾಲೂಕು ವಿಹಿಂಪ ಮತ್ತು ಬಜರಂಗದಳದ ವತಿಯಿಂದ ಶುಕ್ರವಾರ ಸಂಜೆ ಸಾವಿರ ಕಂಬದ ಬಸದಿ ಬಳಿಯಿಂದ ಮೂಡುಬಿದಿರೆ ಸಮಾಜ ಮಂದಿರದವರೆಗೆ ಪಂಜಿನ ಮೆರವಣಿಗೆ ನಡೆಯಿತು.

ಮೂಡುಬಿದಿರೆ ಜೈನ ಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವಯರ್ ಸ್ವಾಮೀಜಿ ಸಾವಿರ ಕಂಬದ ಬಳಿ ಮೆರವಣಿಗೆಗೆ ಚಾಲನೆ ನೀಡಿದರು.

ನಂತರ ಸಮಾಜ ಮಂದಿರದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಪ್ರಾಂತ ಬಲೋಪಸಣಾ ಕೇಂದ್ರದ ಪ್ರಮುಖ್ ನರೇಶ್ ಬೌಧಿಕ್ ಮಾತನಾಡಿ, ಅನೇಕ ಕ್ರಾಂತಿಕಾರಿ ಶಿರೋಮಣಿಗಳ ತ್ಯಾಗ, ಬಲಿದಾನ ಮತ್ತು ಸಮರ್ಪಣಾಭಾವದಿಂದ ಭಾರತ ಸ್ವತಂತ್ರವಾಗಿದೆ ಎಂದರು.

ಕೇವಲ ಯುವಕರು ಮಾತ್ರ ಸ್ವಾತಂತ್ರ್ಯಕ್ಕಾಗಿ ಬಲಿದಾನ ನೀಡಿಲ್ಲ. ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ 81ರ ಹರೆಯದ ಕುಮಾರ್ ಸಿಂಗ್ ಅವರಂತಹ ಹಿರಿಯರು ಕೂಡ ಬಲಿದಾನವಾಗಿದ್ದಾರೆ. ಈ ರೀತಿಯ ನಿರಂತರ ಹೋರಾಟ, ತ್ಯಾಗ ಮತ್ತು ಬಲಿದಾನಗಳ ಮೂಲಕ ವಿಭಜಿತ ಭಾರತ ಸ್ವಾತಂತ್ರ್ಯವನ್ನು ಪಡೆದುಕೊಂಡಿತು ಎಂದು ಹೇಳಿದರು.

ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಸಂದರ್ಭದಲ್ಲಿ ಆಚರಣೆ ಮಾಡಿದ್ದು ಹೂವಿನ ಹಾಸಿಗೆ ಮಾಡಿ ಅಲ್ಲ. ಬದಲಾಗಿ ಲಾಹೋರ್‌ನಿಂದ ಬಂದ ರೈಲಿನಲ್ಲಿ ಲಕ್ಷಾಂತರ ಸಾರ್ವಜನಿಕರ ಹಾಗೂ ಹಿಂದೂ ಬಂಧುಗಳ ಚೆಲ್ಲಾಡಿದ ರಕ್ತಸಿಕ್ತ ದೇಹಗಳು ಈ ದೇಶಕ್ಕೆ ಬಂದವು. ನೂರಾರು ಮಹಿಳೆಯರ ಮೇಲೆ ಅತ್ಯಾಚಾರ ನಡೆದಿತ್ತು. ಈ ದೇಹಗಳ ಮೇಲೆ ನಿಂತು ನಾವು ಸ್ವಾತಂತ್ರ್ಯವನ್ನು ಆಚರಿಸಿದೆವು ಎಂದು ನರೇಶ್ ಬೌಧಿಕ್ ಹೇಳಿದರು.

ರಾಜಕಾರಣಿಗಳ ಮುಸ್ಲಿಂ ತುಷ್ಟೀಕರಣದ ನೀತಿಯಿಂದಾಗಿ ದೇಶ ವಿಭಜನೆಯಾಗಲು ಕಾರಣವಾಯಿತು. ಈ ಮೂಲಕ ದೇಶದಲ್ಲಿ ಲವ್ ಜಿಹಾದ್, ಗೋಹತ್ಯೆ ಮತ್ತು ಮತಾಂಧತೆ ಕೆಲಸ ಮಾಡುತ್ತಿವೆ ಎಂದು ಅವರು ಹೇಳಿದರು. ಈ ದೇಶವನ್ನು ರಕ್ಷಣೆ ಮಾಡಿರುವಂತಹ ಶೌರ್ಯಯುತ ಸಮಾಜ ಹಿಂದೂ ಸಮಾಜವಾಗಿದ್ದು, ಮುಂದೆಯೂ ನಿರಂತರ ಹೋರಾಟ ಮಾಡುವ ಮೂಲಕ ಅಖಂಡತೆಯನ್ನು ಕಾಪಾಡುವ ಹೊಣೆ ನಮ್ಮ ಮೇಲಿದೆ ಎಂದರು.

ನಿವೃತ್ತ ಪೊಲೀಸ್ ಉಪ ನಿರೀಕ್ಷಕ ರಾಜಾರಾಮ್ ನಾಗರಕಟ್ಟೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಪಾಕಿಸ್ಥಾನಕ್ಕೆ ಔಷಧ ಮತ್ತು ನೀರು ಹೋಗುವುದು ನಮ್ಮ ದೇಶದಿಂದ ಆದರೂ ಅವರು ನಮಗೆ ವಿರೋಧವಾಗಿದ್ದಾರೆ. ನಮ್ಮದೇ ದೇಶದಲ್ಲಿ ಗಾಳಿ, ಆಹಾರ ಸೇವಿಸುವ ನಮ್ಮವರೇ ನಮ್ಮ ನಾಯಕರ ಬಗ್ಗೆ ವಿರೋಧವಾಗಿ ಮಾತನಾಡುವುದು ನೋವು ತರುವಂತದ್ದು. ಸಂಘಟನೆಯಲ್ಲಿದ್ದು ಮತ್ತೆ ಬಿಟ್ಟು ಹೋದ ನಂತರ ಮಾತನಾಡುವುದು ಸರಿಯಲ್ಲ ಎಂದರು.

ವಿಹಿಂಪ ಮೂಡುಬಿದಿರೆ ಪ್ರಖಂಡದ ಅಧ್ಯಕ್ಷ ಶಾಂತರಾಮ ಕುಡ್ವ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ವಿಹಿಂಪದ ಕಾರ್ಯಾಧ್ಯಕ್ಷ ಚೇತನ್ ಕುಮಾರ್ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ 79 ವರ್ಷಗಳ ಹಿಂದೆ ನಮ್ಮ ದೇಶ ಅಖಂಡವಾಗಿತ್ತು. ರಾಜಕಾರಣಿಗಳ ಅವರವರ ಲಾಭಕ್ಕಾಗಿ ದೇಶ ತುಂಡಾಗಿದೆ. ಮುಂದಿನ ದಿನಗಳಲ್ಲಿ ಅಖಂಡವಾಗಲು ಸಂಕಲ್ಪ ಮಾಡಬೇಕು ಎಂದರು. ಸಂಪತ್ ಕೊಣಾಜೆ ಕಾರ್ಯಕ್ರಮ ನಿರೂಪಿಸಿದರು.

ಸಾವಿರ ಕಂಬದ ಬಸದಿ ಬಳಿಯಿಂದ ಸಮಾಜ ಮಂದಿರದವರೆಗೆ ನಡೆದ ಪಂಜಿನ ಮೆರವಣಿಗೆಯಲ್ಲಿ ವಿಹಿಂಪದ ತಾಲೂಕು ಕಾರ್ಯದರ್ಶಿ ಪ್ರವೀಣ್ ಕನ್ಯಾಂಡ, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಸುದರ್ಶನ್ ಎಂ., ಬಿಜೆಪಿ ಮುಲ್ಕಿ-ಮೂಡುಬಿದಿರೆ ಮಂಡಲಾಧ್ಯಕ್ಷ ದಿನೇಶ್ ಪುತ್ರನ್, ಪ್ರ. ಕಾರ್ಯದರ್ಶಿ ರಂಜಿತ್ ಪೂಜಾರಿ, ಪುರಸಭೆಯ ಮಾಜಿ ಅಧ್ಯಕ್ಷ ಪ್ರಸಾದ್ ಕುಮಾರ್, ಯುವಮೋರ್ಚಾದ ಅಧ್ಯಕ್ಷ ಕುಮಾರ್ ಪ್ರಸಾದ್, ಉಪಾಧ್ಯಕ್ಷ ಸಚಿನ್ ಪಣಪಿಲ, ಕಾರ್ಯದರ್ಶಿ ಭರತ್ ಶೆಟ್ಟಿ, ಪ್ರಮುಖರಾದ ಕೆ. ಪಿ. ಸುಚರಿತ ಶೆಟ್ಟಿ, ಈಶ್ವರ್ ಕಟೀಲು, ಕೆ. ಪಿ. ಜಗದೀಶ ಅಧಿಕಾರಿ, ಕಸ್ತೂರಿ ಪಂಜ, ಲೀಲಾ ಬಂಜನ್, ಸುಕೇಶ್ ಶೆಟ್ಟಿ ಎದಮಾರು, ಅಶ್ವಥ್ ಪಣಪಿಲ, ಚಾವಡಿಮನೆ ಜಗನ್ನಾಥ ಶೆಟ್ಟಿ, ಬಜರಂಗದಳದ ಅಭಿಲಾಷ್ ಅರ್ಜುನಾಪುರ, ರಮಿತಾ ಸೂರ್ಯವಂಶಿ, ಸುನೀಲ್ ಪಣಪಿಲ, ಪವರ್ ಫ್ರೆಂಡ್ಸ್‌ನ ಅಧ್ಯಕ್ಷ ವಿನಯ್ ಕುಮಾರ್, ಸರ್ವೋದಯ ಫ್ರೆಂಡ್ಸ್ ಬೆದ್ರದ ಅಧ್ಯಕ್ಷ ಗುರು, ನೇತಾಜಿ ಬ್ರಿಗೇಡ್‌ನ ರಾಹುಲ್ ಕುಲಾಲ್, ಜವನೆರ್ ಬೆದ್ರದ ಅಮರ್ ಕೋಟೆ, ಇಲೆವೆನ್ ಬೆದ್ರದ ಅಖಿಲ್, ತ್ರಿಶೂಲ್ ಫ್ರೆಂಡ್ಸ್‌ನ ರಕ್ಷಿತ್ ಸಹಿತ ಕಾರ್ಯಕರ್ತರು ಪಾಲ್ಗೊಂಡಿದ್ದರು.