ಮೂಡುಬಿದಿರೆ: ಕಡಲಕೆರೆಯ ಪ್ರೇರಣಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಟಿಕೂಟ ಕಾರ್ಯಕ್ರಮ ನಡೆಯಿತು. ಹನುಮಗಿರಿ ಮೇಳದ ಭಾಗವತ ರವಿಚಂದ್ರ ಕನ್ನಡಿಕಟ್ಟೆ ದೀಪ ಪ್ರಜ್ವಲನೆ ನೆರವೇರಿಸಿ, ತುಳುನಾಡಿನ ಸಾಂಪ್ರದಾಯಿಕ ಶೈಲಿಯಲ್ಲಿ ಕಳಸೆಯಲ್ಲಿ ಇರಿಸಿದ ಭತ್ತದ ರಾಶಿಯ ಮಧ್ಯದ ತೆಂಗಿನ ಕೊಂಬನ್ನು ಅರಳಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ತುಳು ಕ್ಯಾಲೆಂಡರ್‌ನ ಆಟಿ ತಿಂಗಳು ತುಳುವರ ಸಂಸ್ಕೃತಿಯ ಪ್ರತೀಕವಾಗಿದೆ. ಆಟಿ ತಿಂಗಳಲ್ಲಿ ಪ್ರಕೃತಿಯಲ್ಲಿ ದೊರಕುವ ವಸ್ತುಗಳನ್ನು ಆಹಾರವಾಗಿ ಬಳಸಲಾಗುತ್ತದೆ. ಆಟಿ ಅಮಾವಾಸ್ಯೆಯಂದು ಸೇವಿಸುವ ಪಾಲೆಮರದ ತೊಗಟೆಯಿಂದ ತಯಾರಿಸುವ ಕಷಾಯ ಸರ್ವರೋಗಗಳನ್ನು ಪರಿಹರಿಸುವ ಶಕ್ತಿ ಹೊಂದಿದೆ. ಸ್ವರ್ಗಲೋಕದ ವೈದ್ಯರಾದ ಅಶ್ವಿನೀ ದೇವತೆಗಳು ಆಟಿ ಅಮಾವಾಸ್ಯೆಯಂದು ಪಾಲೆಮರದಲ್ಲಿ ಅನುಸಂಧಾನಗೊಳ್ಳುತ್ತಾರೆ ಎಂಬ ಉಲ್ಲೇಖ ಶಾಸ್ತ್ರಗಳಲ್ಲಿರುವ ಕಾರಣ ಈ ಕಷಾಯವು ಸರ್ವರೋಗಹಾರಕ ಗುಣ ಹೊಂದಿದೆ ಎಂದು ರವಿಚಂದ್ರ ಕನ್ನಡಿಕಟ್ಟೆ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೇರಣಾ ಶಾಲೆಯ ಸಂಚಾಲಕ ಎಂ. ಶಾಂತರಾಮ ಕುಡ್ವ, ಆಟಿ ತಿಂಗಳು ಅನಿಷ್ಟದ ತಿಂಗಳಲ್ಲ; ಹಿಂದಿನ ಕಾಲದಲ್ಲಿ ಜೋರಾದ ಮಳೆಯಿಂದ ಕೆಲಸವಿಲ್ಲದೆ ಕಷ್ಟ ಅನುಭವಿಸುತ್ತಿದ್ದ ತಿಂಗಳು ಎಂದು ಹೇಳಿದರು. “ಆಟಿ ತಿಂಗಳು ಆನೆಯಂತೆ ಸಾಗಿದರೆ, ಸೋಣ ತಿಂಗಳು ಕುದುರೆಯಂತೆ ಸಾಗುತ್ತದೆ” ಎಂಬ ತುಳುನಾಡಿನ ಗಾದೆಯನ್ನು ಉಲ್ಲೇಖಿಸಿದ ಅವರು, ಆಟಿ ತಿಂಗಳು ಕಷ್ಟದ ಕಾಲವಾಗಿದ್ದರಿಂದ ಆನೆಯಂತೆ ನಿಧಾನವಾಗಿ ಸಾಗುವಂತೆ ಭಾಸವಾದರೆ, ಸೋಣ (ಶ್ರಾವಣ) ತಿಂಗಳಲ್ಲಿ ಹಬ್ಬಗಳ ಸಾಲು ಇರುವುದರಿಂದ ಕುದುರೆಯಂತೆ ವೇಗವಾಗಿ ಸಾಗುವಂತೆ ಭಾಸವಾಗುತ್ತದೆ ಎಂದು ವಿವರಿಸಿದರು.

ಪ್ರೇರಣಾ ಶಾಲೆಯ ಮುಖ್ಯ ಶಿಕ್ಷಕಿ ವತ್ಸಲಾ ರಾಜೇಶ್ ಅತಿಥಿಗಳನ್ನು ಸ್ವಾಗತಿಸಿದರು. ಶಿಕ್ಷಕಿ ಪ್ರಿಯಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಗ್ರೀಷ್ಮಾ ವಂದಿಸಿದರು. ರವಿಚಂದ್ರ ಕನ್ನಡಿಕಟ್ಟೆಯವರ ಧರ್ಮಪತ್ನಿ ಶುಭಾ ಹಾಗೂ ಸೇವಾಂಜಲಿ ಎಜುಕೇಶನ್ ಟ್ರಸ್ಟ್‌ನ ಟ್ರಸ್ಟೀ ಡಾ. ಆನಂದ ಕಾರ್ಲ ಉಪಸ್ಥಿತರಿದ್ದರು.

ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ರೀತಿಯಲ್ಲಿ ಶಿಕ್ಷಕ, ಶಿಕ್ಷಕಿ, ಶಿಕ್ಷಕೇತರ ಸಿಬ್ಬಂದಿ ಹಾಗೂ ಶಾಲಾ ವಿದ್ಯಾರ್ಥಿಗಳು ವೇದಿಕೆಯನ್ನು ಅಲಂಕರಿಸಿದ್ದು ವಿಶೇಷವಾಗಿತ್ತು. ತುಳುನಾಡಿನ ಪಾರಂಪರಿಕ ಸಲಕರಣೆಗಳಾದ ಕಳಸಿಗೆ, ಕತ್ತಿ, ಹಲ್ಲುಕತ್ತಿ, ಪರ್ಕತ್ತಿ, ಸಂಬರಮರಾಯಿ, ತಟ್ಟಿ, ಬಲಾಯಿ, ಓಡಮರಾಯಿ, ಕೈಲ್, ಬಿಸಲೆ, ಸೇರು-ಪಾವು, ಕಾವಲಿ ಹಾಗೂ ಆಹಾರ ವಸ್ತುಗಳಾದ ಸಿಯಾಳ, ತೆಂಗಿನಕಾಯಿ, ಕಣಿಲೆ, ಹಲಸಿನ ಹಣ್ಣು, ಬಾಳೆಹಣ್ಣು ಮತ್ತು ವಿವಿಧ ಆಯುರ್ವೇದ ಸಸ್ಯಗಳನ್ನು ಜೋಡಿಸಲಾಗಿತ್ತು. ಆಟಿಕೆಯ ಚೆನ್ನೆದಮಣೆಯನ್ನೂ ವೇದಿಕೆಯ ಮುಂಭಾಗದಲ್ಲಿ ಇರಿಸಲಾಗಿತ್ತು.

ರವಿಚಂದ್ರ ಕನ್ನಡಿಕಟ್ಟೆ ಮತ್ತು ಶುಭಾ ದಂಪತಿಗಳನ್ನು ಸಂಚಾಲಕ ಎಂ. ಶಾಂತರಾಮ ಕುಡ್ವ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಶಾಲೆಯ ಪರವಾಗಿ ಗೌರವಿಸಿದರು. ನಂತರ ಶಾಲಾ ವಿದ್ಯಾರ್ಥಿಗಳ ಪೋಷಕರು ಮನೆಯಲ್ಲಿಯೇ ತಯಾರಿಸಿದ ತುಳುನಾಡಿನ ವಿವಿಧ ಪದಾರ್ಥ, ಖಾದ್ಯಗಳು ಹಾಗೂ ಸಿಹಿತಿನಿಸುಗಳಾದ ಮೂಡೆ, ಪತ್ರೋಡೆ, ಹಲಸಿನ ಗಟ್ಟಿ, ಅರಸಿನ ಎಲೆಯ ಗಟ್ಟಿ, ಕಡುಬುಗಳನ್ನು ಚಟ್ನಿಯೊಂದಿಗೆ ವಿದ್ಯಾರ್ಥಿಗಳು, ಶಿಕ್ಷಕ-ಶಿಕ್ಷಕಿ, ಶಿಕ್ಷಕೇತರ ಸಿಬ್ಬಂದಿ ಹಾಗೂ ಆಡಳಿತ ಮಂಡಳಿಯವರು ಸಹಭೋಜನ ಮಾಡಿದರು.