ಮೂಡುಬಿದಿರೆ: ಮೂಡುಬಿದಿರೆ ವಲಯ ಸಂಯುಕ್ತ ಜಮಾಅತ್ ವ್ಯಾಪ್ತಿಯ 14 ಮೊಹಲ್ಲಾಗಳ ನೂತನ ಖಾಝಿಯಾಗಿ ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಮಂಡಳಿ ಅಧ್ಯಕ್ಷ ಸಯ್ಯಿದ್ ಜಿಫ್ರಿ ಮುತ್ತುಕೋಯ ತಂಙಳ್ ನೇಮಕಗೊಂಡಿದ್ದು, ಅವರ ಖಾಝಿ ಪದವಿ ಸ್ವೀಕಾರ ಸಮಾರಂಭವು ಆಗಸ್ಟ್ 18ರ ಮಂಗಳವಾರ ಸಂಜೆ 3 ಗಂಟೆಗೆ ಗಂಟಾಲಕಟ್ಟೆಯ ಬದ್ರಿಯಾ ಜುಮಾ ಮಸೀದಿ ಪರಿಸರದಲ್ಲಿ ಜರುಗಲಿದೆ ಎಂದು ಮೂಡುಬಿದಿರೆ ವಲಯ ಸಂಯುಕ್ತ ಜಮಾಅತ್ ಪ್ರಧಾನ ಕಾರ್ಯದರ್ಶಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಮಾರಂಭದ ದುಆ ಪ್ರಾರ್ಥನೆಗೆ ಸಯ್ಯಿದ್ ಅಲಿ ತಂಙಳ್ ಕುಂಬೋಳ್ ನೇತೃತ್ವ ನೀಡಲಿದ್ದಾರೆ. ಮೂಡುಬಿದಿರೆ ವಲಯ ಸಂಯುಕ್ತ ಜಮಾಅತ್ ಅಧ್ಯಕ್ಷ ಎಂ. ಅಬ್ದುಲ್ ರಹಿಮಾನ್ ಅಧ್ಯಕ್ಷತೆ ವಹಿಸಲಿದ್ದು, ಸಮಸ್ತ ಕೇಂದ್ರ ಮುಶಾವರ ಸದಸ್ಯ ಎ.ಪಿ. ಅಬ್ದುರ್ರಹ್ಮಾನ್ ಮುಸ್ಲಿಯಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅಬ್ದುಲ್ ಖಾದಿರ್ ಅಲ್ ಖಾಸಿಮಿ ಬಂಬ್ರಾಣ ಹಾಗೂ ಉಸ್ಮಾನ್ ಫೈಝಿ ತೋಡಾರ್ ಅನುಗ್ರಹ ಪ್ರಭಾಷಣ ಮಾಡಲಿದ್ದಾರೆ. ಅಬ್ದುಲ್ ಸತ್ತಾರ್ ಬಂದ್ಯೋಡ್ ಮುಖ್ಯ ಪ್ರಭಾಷಣ ನೆರವೇರಿಸಲಿದ್ದು, ಮೈಸೂರು ಅಜೀಜಿಯಾ ತಂಜೀಮ್ ಬೈತಂಗಡಿ ಹಾಗೂ ಕೋಲಾರದ ರಫೀಕ್ ಅಹ್ಮದ್ ಮದನಿ ಆಶಂಸ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಉಮರ್ ತಂಙಳ್ ಶಿರ್ವ, ಹುಸೈನ್ ಬಾಖವಿ ತಂಜೀಮ್ ಈರ್ಕಜೆ, ಅಕ್ರಂ ಅಲಿ ತಂಙಳ್ ಸೇರಿದಂತೆ ಹಲವು ಸಾದಾತ್‌ಗಳು, ಉಲಮಾ-ಉಮರಾ ಹಾಗೂ ಸಾಮಾಜಿಕ-ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಜಮಾಅತ್ ಅಧ್ಯಕ್ಷ ಎಂ. ಅಬ್ದುಲ್ ರಹಿಮಾನ್, ಪತ್ರಿಕಾ ಕಾರ್ಯದರ್ಶಿ ಮಹಮ್ಮದ್ ಶಾಫಿ, ಸದಸ್ಯ ಲಿಯಾಖತ್ ಸುದ್ದಿಗೋಷ್ಠಿಯಲ್ಲಿದ್ದರು.