ಮೂಡುಬಿದಿರೆ: ಜೈನಕಾಶಿ ಮೂಡುಬಿದಿರೆಯ ಎಲ್ಲ 18 ಬಸದಿ ಗಳಲ್ಲಿ ಸೋಮವಾರ ಬಸದಿ ಮೂಲಸ್ವಾಮಿಗೆ ಅಭಿಷೇಕ ನಡೆಯಿತು. ಆಯಾ ಬಸದಿ ಗಳಿಗೆ ಸಂಬಂಧಪಟ್ಟ ಭಕ್ತರು ನಾಗಬನಗಳಿಗೆ ತೆರಳಿ ನಾಗದೇವರಿಗೆ ಹಾಲು, ಹಣ್ಣು-ಕಾಯಿ ಸಮರ್ಪಿಸಿ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಗುರು ಬಸದಿ ಯಲ್ಲಿ ಉಪಸ್ಥಿತರಿದ್ದ ಮೂಡುಬಿದಿರೆ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಪಟ್ಟಾಚಾರ್ಯವರ್ಯ ಸ್ವಾಮೀಜಿ ಆಶೀರ್ವಾದ ನೀಡಿದರು. ಪೂಜೆಯಲ್ಲಿ ಭಾಗವಹಿಸಿದ ಸರ್ವರಿಗೂ ಒಳಿತಾಗಲಿ ಹಾಗೂ ಲೋಕಶಾಂತಿ ನೆಲೆಸಲಿ ಎಂದು ಪ್ರಾರ್ಥಿಸಿದರು.

ಜೈನ ಧರ್ಮದಲ್ಲಿ ಪ್ರತಿದಿನದ ನಿತ್ಯಪೂಜೆಯ ಸಂದರ್ಭದಲ್ಲಿ ಪಂಚಕುಮಾರ ಪೂಜೆ ಹಾಗೂ ಶ್ರೀ ಜಿನೇಂದ್ರ ಭಗವಂತನ ಪೂಜೆಗೆ ಮೊದಲು ಸಂಧ್ಯಾವಂದನೆ ವಿಧಿಯಲ್ಲಿ ನಾಗದೇವರಿಗೆ ಉಪಚಾರ ಪೂಜೆ ಸಲ್ಲಿಸಲಾಗುತ್ತದೆ. ಕಲಶ ಸ್ಥಾಪನೆ ಮತ್ತು ಪುಣ್ಯಾಹವಾಚನದ ಸಂದರ್ಭದಲ್ಲಿ ‘ನಾಗಮಂತ್ರ’ಗಳನ್ನು ಉಚ್ಚರಿಸಿ ಸ್ಮರಿಸಲಾಗುತ್ತದೆ ಎಂದು ಸ್ವಾಮೀಜಿ ತಿಳಿಸಿದರು.ನಾಗಪೂಜೆ ಮತ್ತು ಆರಾಧನೆಗೆ ಪ್ರಾಚೀನ ಇತಿಹಾಸವಿದ್ದು, ಚತುರ್ಥ ಕಾಲದ ಪ್ರಥಮ ತೀರ್ಥಂಕರರಾದ ಭಗವಾನ್ ಆದಿನಾಥರ ಕಾಲದಿಂದಲೇ ನಾಗದೇವರನ್ನು ಪೂಜಿಸಿ ಆರಾಧಿಸಲಾಗುತ್ತಿದೆ ಎಂದು ಅವರು ಹೇಳಿದರು. ಪೂಜೆಯಲ್ಲಿ ಅಷ್ಟಕುಲನಾಗರು ಪ್ರಮುಖರಾಗಿದ್ದು, ಒಟ್ಟು ಅರುವತ್ತು ಸಾವಿರ ನಾಗಕುಲಗಳನ್ನು ನಿತ್ಯ ಸ್ಮರಿಸಿ ಅರ್ಘ್ಯ ನೀಡಲಾಗುತ್ತದೆ. 23ನೇ ತೀರ್ಥಂಕರರಾದ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿಯ ಯಕ್ಷ ಧರಣೇಂದ್ರ ದೇವ ಹಾಗೂ ಪದ್ಮಾವತಿ ಭವನವಾಸಿ ಜಿನಶಾಸನ ರಕ್ಷಣಾ ದೇವರಾಗಿದ್ದಾರೆ. ಭವನವಾಸಿ ದೇವತೆಗಳು ಹಾಗೂ ಜಿನಶಾಸನ ರಕ್ಷಕ ದೇವರನ್ನು ಉಪಚಾರ, ವಿನಯ ಮತ್ತು ಕೃತಜ್ಞತಾಪೂರ್ವಕ ಭಕ್ತಿಯಿಂದ ಉಪಚರಿಸಲಾಗುತ್ತದೆ ಎಂದು ಸ್ವಾಮೀಜಿ ಹೇಳಿದರು. ಈ ಸಂದರ್ಭದಲ್ಲಿ ದರ ಸೇನ, ನೇಮಿ ರಾಜ್, ವೀರೇಂದ್ರ, ಅಭಯ ಕುಮಾರ್, ಪಾರ್ಶ್ವನಾಥ, ವೃಂದಾ ರಾಜೇಂದ್ರ ಅರಮನೆ, ಮಂಜುಳಾ ಅಭಯ ಚಂದ್ರ, ಸುಧಾ, ದಿವ್ಯಾ ಹಾಗೂ ಆರತಿ ಉಪಸ್ಥಿತರಿದ್ದರು. ಗುರು ಬಸದಿ ಯಲ್ಲಿ ವಿರಾಜ್ ಇಂದ್ರ ಹಾಗೂ ಸಾವಿರ ಕಂಬ ಬಸದಿ ಯಲ್ಲಿ ಜಗತ್ಪಾಲ ಇಂದ್ರ ಪೂಜೆ ನೆರವೇರಿಸಿದರು.