ಮೂಡುಬಿದಿರೆ: ಆಟಿ ತಿಂಗಳು ಕೇವಲ ಸಂಭ್ರಮ ಮತ್ತು ಔತಣ ಕೂಟಕ್ಕೆ ಸೀಮಿತವಾಗಿರದೆ, ಹಿಂದಿನ ಕಾಲದ ಕಷ್ಟದ ಬದುಕನ್ನು ಇಂದಿನ ಮಕ್ಕಳಿಗೆ ತಿಳಿಸುವ ಸಂದರ್ಭವಾಗಬೇಕು ಎಂದು ಬೆದ್ರ ತುಳುಕೂಟ ಸ್ಥಾಪಕ ಅಧ್ಯಕ್ಷ, ಎಲ್ಐಸಿ ಸಲಹಾ ಅಧಿಕಾರಿ ಚಂದ್ರಹಾಸ ದೇವಾಡಿಗ ಹೇಳಿದರು.
ಮೂಡುಬಿದಿರೆ: ಆಟಿ ತಿಂಗಳು ಕೇವಲ ಸಂಭ್ರಮ ಮತ್ತು ಔತಣ ಕೂಟಕ್ಕೆ ಸೀಮಿತವಾಗಿರದೆ, ಹಿಂದಿನ ಕಾಲದ ಕಷ್ಟದ ಬದುಕನ್ನು ಇಂದಿನ ಮಕ್ಕಳಿಗೆ ತಿಳಿಸುವ ಸಂದರ್ಭವಾಗಬೇಕು ಎಂದು ಬೆದ್ರ ತುಳುಕೂಟ ಸ್ಥಾಪಕ ಅಧ್ಯಕ್ಷ, ಎಲ್ಐಸಿ ಸಲಹಾ ಅಧಿಕಾರಿ ಚಂದ್ರಹಾಸ ದೇವಾಡಿಗ ಹೇಳಿದರು.
ಶ್ರೀರಾಮಪುರ, ಗೌರಿಕರೆಯ ದೇವಾಡಿಗ ಸಂಘದ ಸಭಾಭಾವನದಲ್ಲಿ ನಡೆದ ದೇವಾಡಿಗರ 14ನೇ ವರ್ಷದ ಆಷಾಢದ ಒಂದು ದಿನದ ಕೂಟದಲ್ಲಿ ಮಾತನಾಡಿದ ಅವರು, ಹಿಂದಿನ ದಿನಗಳಲ್ಲಿ ಆಟಿ ತಿಂಗಳಲ್ಲಿ ಹಲಸಿನ ಬೀಜ, ಉಪ್ಪಿನಕಾಯಿ, ಚಟ್ನಿಯಂತಹ ಸರಳ ಆಹಾರವೇ ಮುಖ್ಯವಾಗಿತ್ತು. ಇಂದು ಆಟಿಯನ್ನು ವೈಭವದಿಂದ ಆಚರಿಸುವಾಗ ಅದರ ಹಿಂದಿನ ಸಂಕಷ್ಟದ ಬದುಕನ್ನು ಮರೆಯಬಾರದು ಎಂದರು.
ಆಟಿಕಳೆಂಜನಂತಹ ಸಾಂಪ್ರದಾಯಿಕ ಆಚರಣೆಗಳ ಮಹತ್ವವನ್ನು ಮಕ್ಕಳಿಗೆ ತಿಳಿಸಬೇಕು. ಆಟಿ ತಿಂಗಳಲ್ಲಿ ಮಾಂಸಾಹಾರಕ್ಕಿಂತ ಸರಳ ಸಸ್ಯಾಹಾರಕ್ಕೆ ಆದ್ಯತೆ ನೀಡುತ್ತಿದ್ದ ಹಿರಿಯರ ಸಂಪ್ರದಾಯವನ್ನು ನೆನಪಿಸಿಕೊಳ್ಳಬೇಕು ಎಂದರು.
ಕೂಟದಲ್ಲಿ ತರಕಾರಿ ಊಟದ ವ್ಯವಸ್ಥೆ ಮಾಡಿರುವುದನ್ನು ಶ್ಲಾಘಿಸಿದ ಚಂದ್ರಹಾಸ ದೇವಾಡಿಗ, ಸಮಾಜದ ಹಿರಿಯರು ಕಷ್ಟಪಟ್ಟು ಬದುಕಿ ಮುಂದಿನ ಪೀಳಿಗೆಯನ್ನು ಬೆಳೆಸಿದ ರೀತಿಯನ್ನು ಸ್ಮರಿಸಬೇಕು ಎಂದು ಹೇಳಿದರು.
ಗಣೇಶ್ ಪ್ರಸಾದ್ ಉದ್ಘಾಟಿಸಿ ಮಾತನಾಡಿ, ಆಟಿ ತಿಂಗಳು ಕೇವಲ ಸಂಭ್ರಮಾಚರಣೆಯ ಕಾಲವಲ್ಲ. ಧಾರಾಕಾರ ಮಳೆ, ಪ್ರವಾಹ, ಬಡತನ ಹಾಗೂ ಸಾಂಕ್ರಾಮಿಕ ರೋಗಗಳ ನಡುವೆ ಹಿರಿಯರು ಆಟಿ ತಿಂಗಳನ್ನು ಹೇಗೆ ಕಳೆದರು ಎಂಬುದನ್ನು ನೆನಪಿಸಿಕೊಳ್ಳುವ ಸಂದರ್ಭವಾಗಿದೆ ಎಂದರು.
ಆಟಿ ಆಚರಣೆಗಳ ಹಿಂದೆ ಆರೋಗ್ಯ, ಪರಿಸರ ಹಾಗೂ ಜೀವನಾನುಭವ ಆಧಾರಿತ ಜ್ಞಾನವಿದ್ದು, ಹಿಂದಿನವರು ಔಷಧಿ, ಸೊಪ್ಪು ಹಾಗೂ ತರಕಾರಿಗಳನ್ನು ವೈಜ್ಞಾನಿಕ ಕಾರಣಗಳೊಂದಿಗೆ ಬಳಸುತ್ತಿದ್ದರು ಎಂದು ಗಣೇಶ್ ಪ್ರಸಾದ್ ಹೇಳಿದರು.
ದೇವಾಡಿಗ ಸಂಘ ಮೂಡಬಿದಿರೆಯ ಅಧ್ಯಕ್ಷ ಪುರಂದರ ದೇವಾಡಿಗ, ಮುಲ್ಕಿ ದೇವಾಡಿಗರ ಸಂಘದ ಅಧ್ಯಕ್ಷ ಗಣೇಶ್ ಪ್ರಸಾದ್, ಎಲ್ಐಸಿ ಸಲಹಾ ಅಧಿಕಾರಿ ಚಂದ್ರಹಾಸ ದೇವಾಡಿಗ, ಆಟಿಕೂಟದ ಬಹುಮಾನದ ಪ್ರಾಯೋಜಕರಾದ ರೇಖಾ ಶ್ರೀಧರ್, ಕರ್ನಾಟಕ ರಾಜ್ಯ ದೇವಾಡಿಗರ ಸಂಘದ ಪ್ರತಿನಿಧಿ ಕುಸುಮ, ಮಹಿಳಾ ವೇದಿಕೆ ಅಧ್ಯಕ್ಷೆ ಲಲಿತಾ ಎಸ್ ಮೊಯ್ಲಿ ಹಾಗೂ ಯುವ ವೇದಿಕೆ ಅಧ್ಯಕ್ಷ ಪ್ರೇಮ್ ಶಂಕರ್ ಅತಿಥಿಗಳಾಗಿದ್ದರು.
ಕ್ರೀಡಾ ಕ್ಷೇತ್ರದಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಸ್ವಸ್ತಿಕ್ ದೇವಾಡಿಗ ಹಾಗೂ ಸ್ಟೇಟ್ ಲೆವೆಲ್ ಸಾಧನೆ ಮಾಡಿದ ತೃಪ್ತಿ ಎಸ್ ದೇವಾಡಿಗ ಅವರನ್ನು ಸನ್ಮಾನಿಸಲಾಯಿತು. ಹಿರಿಯರಾದ ಸಿದ್ದು ದೇವಾಡಿಗ ನಿರ್ಕೆರೆ ಅವರನ್ನು ಸನ್ಮಾನಿಸಲಾಯಿತು. ಸಂತೋಷ್ ದೇವಾಡಿಗ, ಲಲನ್ ಅರುಣ್ ಶೇರಿಗಾರ್ ಹಾಗೂ ಅಕ್ಷತಾ ದೇವಾಡಿಗ ಸನ್ಮಾನ ಪತ್ರ ವಾಚಿಸಿದರು. ರಮಾ ಪದ್ಮನಾಭ ನಿರೂಪಿಸಿದರು. ಮಲ್ಲಿಕಾ ಪುರಂದರ್ ದೇವಾಡಿಗ ಸ್ವಾಗತಿಸಿದರು. ಮಮತಾ ಸತೀಶ್ ಬೆಟ್ಕೇರಿ ವಂದಿಸಿದರು.