ಮೂಡುಬಿದಿರೆ: ಭಾರತ್ ಜೋಡೋ ಯುವ ಸಂಘಟನೆ ಸ್ಥಾಪನೆಗೆ ಮೂಡುಬಿದಿರೆ ಪುರಸಭೆಯು ಮಂಗಳವಾರ ಸಿದ್ಧತಾ ಸಭೆ ನಡೆಸಿತು. ಯುವಜನರಲ್ಲಿ ಕ್ರೀಡೆ, ಸಂಸ್ಕೃತಿ, ವೈಜ್ಞಾನಿಕ ಮನೋಭಾವ ಹಾಗೂ ಸಾಮುದಾಯಿಕ ಸಾಮರಸ್ಯವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ, ನಗರ ಪಂಚಾಯಿತಿ ಹಾಗೂ ಪುರಸಭೆ ವ್ಯಾಪ್ತಿಯಲ್ಲಿ ಭಾರತ್ ಜೋಡೋ ಸಂಘಟನೆಯನ್ನು ಸ್ಥಾಪಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ ಎಂದು ಪುರಸಭಾ ಮುಖ್ಯಾಧಿಕಾರಿ ಇಂದು ಎಂ. ಮಾಹಿತಿ ನೀಡಿದರು.
ಪುರಸಭಾ ವ್ಯಾಪ್ತಿಯಲ್ಲಿ 6 ಸಂಘಗಳನ್ನು ರಚಿಸಲು ಅವಕಾಶವಿದ್ದು, ಒಂದು ಸಂಘದಲ್ಲಿ 100 ಜನರನ್ನು ಒಳಗೊಂಡಿರಬೇಕು. ಪ್ರತಿ ಸಂಘಕ್ಕೆ ತಲಾ ರೂ.10 ಲಕ್ಷ ಅನುದಾನ ನೀಡಲಾಗುವುದು. ಸಂಘದಲ್ಲಿ 16ರಿಂದ 35 ವರ್ಷದೊಳಗಿನ ಯುವ ಸಮುದಾಯವನ್ನು ಹೊಂದಿರಬೇಕು. ಇದಕ್ಕೆ ಆಧಾರ್ ಕಡ್ಡಾಯವಾಗಿದೆ ಎಂದು ಇಂದು ಎಂ. ತಿಳಿಸಿದರು. ಸಂಘಗಳನ್ನು ರಚಿಸಲು ಆ.30 ಅಂತಿಮ ದಿನವಾಗಿದ್ದು, ಎಲ್ಲಾ ವಾರ್ಡ್ ಸದಸ್ಯರು ಈ ಪ್ರಕ್ರಿಯೆಗೆ ಸಂಪೂರ್ಣ ಸಹಕಾರ ನೀಡುವಂತೆ ಮುಖ್ಯಾಧಿಕಾರಿ ಮನವಿ ಮಾಡಿದರು. ಪರಿಸರ ಅಭಿಯಂತರೆ ಶಿಲ್ಪಾ ಎಸ್ಪು, ರಸಭೆಯ ಮಾಜಿ ಉಪಾಧ್ಯಕ್ಷ ನಾಗರಾಜ ಪೂಜಾರಿ, ಮಾಜಿ ಸದಸ್ಯರಾದ ಪಿ. ಕೆ. ಥೋಮಸ್, ಕೊರಗಪ್ಪ, ಜೊಸ್ಸಿ ಮಿನೇಜಸ್, ಸುರೇಶ್ ಕೋಟ್ಯಾನ್, ಸುರೇಶ್ ಪ್ರಭು, ಪುರಂದರ ದೇವಾಡಿಗ, ದಿನೇಶ್ ಪೂಜಾರಿ ಹಾಗೂ ನಾಮನಿರ್ದೇಶಿತ ಸದಸ್ಯ ವರುಣ್ ಉಪಸ್ಥಿತರಿದ್ದರು.