ಮಂಗಳೂರು : ಕಂಬಳ ಕೂಟ ನಡೆಯುತ್ತಿರುವ ಸಂದರ್ಭದಲ್ಲಿ ಕ್ರಿಕೆಟ್ ಮ್ಯಾಚ್ ಮಾದರಿಯಲ್ಲಿ ಕಂಬಳ ಕೋಣಗಳ ಓಟದ ಸಂಪೂರ್ಣ ಮಾಹಿತಿ ನೀಡುವ ಲೈವ್ ಸ್ಕೋರ್ ಬೋರ್ಡ್ ಇನ್ನು ಮುಂದೆ ವೀಕ್ಷಕರಿಗೆ ಲಭ್ಯವಾಗಲಿದೆ. ನಮ್ಮ ಕುಡ್ಲ ವಾಹಿನಿ ಈ ಹೊಸ ಪ್ರಯತ್ನಕ್ಕೆ ಮುಂದಾಗಿದ್ದು, ಮಂಗಳವಾರ ನಡೆದ ನಮ್ಮ ಕಂಬಳ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಇದರ ಪರಿಕಲ್ಪನೆಯನ್ನು ಅನಾವರಣಗೊಳಿಸಲಾಯಿತು.
ಕಂಬಳ ಕೂಟದ ವೇಳೆ ಲೈವ್ ಸ್ಕೋರ್ ಬೋರ್ಡ್ ತಯಾರಿಸಿ ಪ್ರದರ್ಶಿಸುವ ಮೂಲಕ ವೀಕ್ಷಕರಿಗೆ ಓಟಕ್ಕೆ ಸಂಬಂಧಿಸಿದ ಮಾಹಿತಿಯನ್ನು ತಕ್ಷಣವೇ ನೀಡುವ ಉದ್ದೇಶವನ್ನು ಈ ಪ್ರಯತ್ನ ಹೊಂದಿದೆ.
ಕಂಬಳ ಕೋಣದ ಯಜಮಾನರು, ಓಟಗಾರರು, ಓಡಿದ ಕೋಣಗಳ ಹೆಸರು, ಸ್ಪರ್ಧೆಯಲ್ಲಿ ಕೋಣಗಳು ಗೆದ್ದ ಅವಧಿ ಸೇರಿದಂತೆ ವಿವಿಧ ಮಾಹಿತಿಗಳನ್ನು ಒಳಗೊಂಡ ಸಾಫ್ಟ್‌ವೇರ್ ಅಪ್‌ಡೇಟ್ ಮಾಡಲಾಗುತ್ತಿದೆ.
ಈ ಪರಿಕಲ್ಪನೆಯ ರೂವಾರಿ ಆದಿತ್ಯ ಕರ್ಕೇರ. ಆದಿತ್ಯ ಕರ್ಕೇರ ಅವರ ಕಲ್ಪನೆಯನ್ನು ಸೇರಿದ ಕಂಬಳ ಸಂಘಟಕರು ಹಾಗೂ ಅಭಿಮಾನಿಗಳು ಕೈಚಪ್ಪಾಳೆ ಬಡಿಯುವ ಮೂಲಕ ಸ್ವಾಗತಿಸಿದರು.