ಮೂಡುಬಿದಿರೆ: ಕಾಂಗ್ರೆಸ್‌ನ ಪ್ರಾಬಲ್ಯವಿದ್ದ ಕಾಲದಲ್ಲಿ ಜನ ಸಂಘದ ಮೂಲಕ ದರೆಗುಡ್ಡೆಯಲ್ಲಿ ಪಕ್ಷದ ಸಿದ್ಧಾಂತವನ್ನು ಜನರಿಗೆ ಪರಿಚಯಿಸಿ, ಮನೆ ಮನೆಗೆ ತೆರಳಿ ಸಂಘಟನೆಯನ್ನು ಗಟ್ಟಿಗೊಳಿಸಿದ್ದ ಜನ ಸಂಘದ ಹಿರಿಯ ಕಾರ್ಯಕರ್ತ ಜಿನದತ್ತ ಹೆಗ್ಡೆ (90) ಬುಧವಾರ ನಿಧನರಾದರು.
ಕಳೆದ ಐದು ದಶಕಗಳ ಹಿಂದೆ ಯಾವುದೇ ಅಧಿಕಾರ, ಸ್ಥಾನಮಾನ ಅಥವಾ ಪ್ರತಿಫಲದ ಅಪೇಕ್ಷೆಯಿಲ್ಲದೆ ಜಿನದತ್ತ ಹೆಗ್ಡೆ ಅವರು ದರೆಗುಡ್ಡೆ ಹಾಗೂ ಮೂಡುಬಿದಿರೆ ಪರಿಸರದಲ್ಲಿ ಭುಜದ ಮೇಲೆ ಚೀಲ ಹಾಕಿಕೊಂಡು ಗ್ರಾಮೀಣ ಪ್ರದೇಶದ ಮನೆ ಮನೆಗೆ ತೆರಳಿ ಜನ ಸಂಘದ ವಿಚಾರಧಾರೆ ಹಾಗೂ ಸಿದ್ಧಾಂತವನ್ನು ಜನರಿಗೆ ಪರಿಚಯಿಸುವ ಕಾರ್ಯ ಮಾಡಿದ್ದರು.
1980ರಲ್ಲಿ ಭಾರತೀಯ ಜನತಾ ಪಕ್ಷ ಅಸ್ತಿತ್ವಕ್ಕೆ ಬಂದ ಬಳಿಕ ದರೆಗುಡ್ಡೆ ಭಾಗದಲ್ಲಿ ಬಿಜೆಪಿಯ ಸಂಘಟನೆಗೆ ಅಡಿಪಾಯ ಹಾಕುವಲ್ಲಿ ಜಿನದತ್ತ ಹೆಗ್ಡೆ ಪ್ರಮುಖ ಪಾತ್ರ ವಹಿಸಿದ್ದರು. ಪಕ್ಷ ಬಲಿಷ್ಠವಾಗಿ ಬೆಳೆಯಲು ಅವರು ಕಾರಣಕರ್ತರಾಗಿದ್ದರು.
“ಇಂದಿನ ಬಿಜೆಪಿಯ ಬೆಳವಣಿಗೆಯ ಕನಸನ್ನು ಅಂದೇ ಕಂಡು, ಆ ಕನಸನ್ನು ನನಸಾಗಿಸಲು ತಮ್ಮ ಜೀವನದ ಅಮೂಲ್ಯ ಸಮಯವನ್ನು ಪಕ್ಷಕ್ಕಾಗಿ ಸಮರ್ಪಿಸಿದ ನಿಷ್ಠಾವಂತ ಕಾರ್ಯಕರ್ತ” ಎಂಬ ಹೆಗ್ಗಳಿಕೆಗೆ ಜಿನದತ್ತ ಹೆಗ್ಡೆ ಪಾತ್ರರಾಗಿದ್ದರು.
ದರೆಗುಡ್ಡೆಯ ಪ್ರಪ್ರಥಮ ಬಿಜೆಪಿ ಕಾರ್ಯಕರ್ತರಾಗಿದ್ದ ಜಿನದತ್ತ ಹೆಗ್ಡೆ ಅವರ ಅಗಲಿಕೆ ಪಕ್ಷದ ಕಾರ್ಯಕರ್ತರು ಹಾಗೂ ಸ್ಥಳೀಯರಿಗೆ ತುಂಬಲಾರದ ನಷ್ಟವಾಗಿದೆ. ಸರಳತೆ, ನಿಷ್ಠೆ ಮತ್ತು ಪಕ್ಷದ ಮೇಲಿನ ಅಚಲ ಬದ್ಧತೆಯಿಂದ ಅವರು ಅನೇಕರಿಗೆ ಮಾದರಿಯಾಗಿದ್ದರು. ಜಿನದತ್ತ ಹೆಗ್ಡೆ ಅವರು ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಮುಲ್ಕಿ ಮೂಡುಬಿದಿರೆ ಕ್ಷೇತ್ರದ ಶಾಸಕ ಉಮನಾಥ್ ಎ ಕೋಟ್ಯಾನ್, ಮಂಡಲಾಧ್ಯಕ್ಷ ದಿನೇಶ್ ಪುತ್ರನ್, ಮಂಡಲ ಪ್ರಧಾನ ಕಾರ್ಯದರ್ಶಿ ರಂಜಿತ್ ಪೂಜಾರಿ ಹಾಗೂ ಹಿಂದು ಜಾಗರಣ ವೇದಿಕೆಯ ಸಮಿತ್ ರಾಜ್ ಸಂತಾಪ ಸೂಚಿಸಿದ್ದಾರೆ.