ಮೂಡುಬಿದಿರೆ: 23ನೇ ರಾಜ್ಯ ಮಟ್ಟದ ಮುಕ್ತ ಕರಾಟೆ ಚಾಂಪಿಯನ್‌ಶಿಪ್‌ನ ತಂಡ ವಿಭಾಗದಲ್ಲಿ ಮಂಗಳೂರಿನ ರೆಡ್ ಕ್ಯಾಮೆಲ್ ಇಸ್ಲಾಮಿಕ್ ಸ್ಕೂಲ್ ಪ್ರಥಮ ಸ್ಥಾನ ಪಡೆದುಕೊಂಡಿದ್ದು, ಡೈಮಂಡ್ ಇಂಟರ್ನ್ಯಾಷನಲ್ ಸ್ಕೂಲ್ ದ್ವಿತೀಯ ಹಾಗೂ ಕಾರ್ಕಳದ ಬರೀರಾ ಇಂಟರ್ನ್ಯಾಷನಲ್ ಸ್ಕೂಲ್ ತೃತೀಯ ಸ್ಥಾನ ಗಳಿಸಿವೆ.

ವೈಯಕ್ತಿಕ ವಿಭಾಗದಲ್ಲಿ ಮೊಹಮ್ಮದ್ ಮಿಶಾಲ್ ಶರೀಫ್, ಮೊಹಮ್ಮದ್ ಶಿಹಾಬುದ್ದೀನ್, ಸಿಂಚನ ಜೇಮ್ಸ್ ಹಾಗೂ ಸಂಜನ ಜೇಮ್ಸ್ ತಮ್ಮ ತಮ್ಮ ವಯೋಮಾನದ ವಿಭಾಗಗಳಲ್ಲಿ ಚಾಂಪಿಯನ್‌ಗಳಾಗಿ ಹೊರಹೊಮ್ಮಿದ್ದು, ಮಜ್ಲಿಸ್ ಪಬ್ಲಿಕ್ ಸ್ಕೂಲ್ ಗ್ರ್ಯಾಂಡ್ ಚಾಂಪಿಯನ್ ಪ್ರಶಸ್ತಿ ಪಡೆದಿದೆ.

ಶೋರಿನ್ ರಿಯು ಕರಾಟೆ ಅಸೋಸಿಯೇಷನ್, ಸ್ವಾಮೀಸ್ ಸ್ಟ್ರೆಂತ್ ಟ್ರೈನಿಂಗ್ ಹಾಗೂ ಎಂ.ಕೆ. ಅನಂತರಾಜ್ ದೈಹಿಕ ಶಿಕ್ಷಣ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ನಡೆದ ಚಾಂಪಿಯನ್‌ಶಿಪ್‌ನ ಸಮಾರೋಪ ಹಾಗೂ ಬಹುಮಾನ ವಿತರಣಾ ಸಮಾರಂಭ ಶನಿವಾರ ಮೂಡುಬಿದಿರೆ ಸ್ಕೌಟ್ಸ್-ಗೈಡ್ಸ್ ಕನ್ನಡ ಭವನದಲ್ಲಿ ನಡೆಯಿತು. ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿದ್ದರು. ಎಂ.ಕೆ. ಅನಂತರಾಜ್ ದೈಹಿಕ ಶಿಕ್ಷಣ ಕಾಲೇಜಿನ ಪ್ರಾಂಶುಪಾಲ ಧನಂಜಯ ಶೆಟ್ಟಿ ಮುಖ್ಯ ಅತಿಥಿಯಾಗಿದ್ದರು. ಫಾರ್ಚೂನ್ ಪ್ರಮೋಟರ್ಸ್ ಪಾಲುದಾರ ಅಬುಲ್ ಅಲಾ ಪುತ್ತಿಗೆ, ಎಂ., ಅಂತಾರಾಷ್ಟ್ರೀಯ ಪ್ರಮಾಣಿತ ತರಬೇತುದಾರ ಸ್ವಾಮಿ ಪ್ರಸಾದ್ ಮೂಡುಬಿದಿರೆ, ಉಳ್ಳಾಲ ತಾಲೂಕು ಸಜಿಪನಾಡು ನೂರಿಯಾ ಪಬ್ಲಿಕ್ ಶಾಲೆಯ ಸಂಚಾಲಕ ಅಬ್ದುಲ್ ಅಜೀಜ್ ಕುನ್ನಿಲ್ ಅತಿಥಿಗಳಾಗಿದ್ದರು. ರಾಜ್ಯ ಕರಾಟೆ ಶಿಕ್ಷಕರ ಸಂಘದ ಉಪಾಧ್ಯಕ್ಷ ಸತೀಶ್ , ಸದಸ್ಯ ರವಿ ಕೋಟ್ಯಾನ್, ದಕ್ಷಿಣ ಕನ್ನಡ ಜಿಲ್ಲಾ ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷ ಡಾ. ರಾಹುಲ್ ಟಿ.ಜಿ. ಮಂಗಳೂರು, ಉದ್ಯಮಿ ಅರುಣ್ ಕುಮಾರ್ ನಿಟ್ಟೆ ಹಾಗೂ ರಾಜ್ಯ ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷ ಮತ್ತು ಶೋರಿನ್ ರಿಯು ಕರಾಟೆ ಅಸೋಸಿಯೇಷನ್‌ನ ಮುಖ್ಯ ತರಬೇತುದಾರ ಮಹಮ್ಮದ್ ನದೀಮ್ ಉಪಸ್ಥಿತರಿದ್ದರು.

ಫಲಿತಾಂಶ : ವೈಯಕ್ತಿಕ ವಿಭಾಗದ 14 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಚೈತನ್ಯ ಪಬ್ಲಿಕ್ ಸ್ಕೂಲ್, ಕೃಷ್ಣಾಪುರದ ಮೊಹಮ್ಮದ್ ಮಿಶಾಲ್ ಶರೀಫ್, 16 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಜಾಮಿಯಾ ಇಂಗ್ಲಿಷ್ ಹೈಸ್ಕೂಲ್, ಸುರತ್ಕಲ್‌ನ ಮೊಹಮ್ಮದ್ ಶಿಹಾಬುದ್ದೀನ್ ಚಾಂಪಿಯನ್‌ರಾದರು. ಬಾಲಕಿಯರ ವಿಭಾಗದಲ್ಲಿ 14 ವರ್ಷದೊಳಗಿನವರ ವಿಭಾಗದಲ್ಲಿ ಸೈಂಟ್ ಸಾವಿಯೋ, ಬೆಳ್ತಂಗಡಿಯ ಸಿಂಚನ ಜೇಮ್ಸ್ ಹಾಗೂ 16 ವರ್ಷದೊಳಗಿನವರ ವಿಭಾಗದಲ್ಲಿ ಅದೇ ಸಂಸ್ಥೆಯ ಸಂಜನ ಜೇಮ್ಸ್ ಚಾಂಪಿಯನ್‌ರಾದರು. ಮಜ್ಲಿಸ್ ಪಬ್ಲಿಕ್ ಸ್ಕೂಲ್ ಗ್ರ್ಯಾಂಡ್ ಚಾಂಪಿಯನ್ ಪ್ರಶಸ್ತಿ ಪಡೆಯಿತು.

ನವೀನ್ ಅಂಬೂರಿ ಕಾರ್ಯಕ್ರಮ ನಿರೂಪಿಸಿದರು.