ಮೂಡುಬಿದಿರೆ: ಅವಿಭಜಿತ ದಕ್ಷಿಣ ಕನ್ನಡ ಜನಪದ ಶಾಖಾ ವಿಶ್ವ ವೈದಿಕ ಸಭಾ ವತಿಯಿಂದ 14ನೇ ವರ್ಷದ ಪುರೋಹಿತ ಸಮ್ಮೇಳನವು ಮೂಡುಬಿದಿರೆ ಶ್ರೀ ಶ್ರೀ ಶ್ರೀ ಅಯ್ಯಸ್ವಾಮೀ ಮಠದ ಎದುರು ಪಾಲ್ಕೆ ಇಂದಿರಾ ಸಭಾಭವನದಲ್ಲಿ ಮೂರು ದಿನಗಳ ಕಾಲ ನಡೆಯಿತು.

ವೈದಿಕ ಸಂಪ್ರದಾಯವನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ನಡೆದ ಸಮ್ಮೇಳನದಲ್ಲಿ“ಪುರೋಹಿತರಿಂದ–ಪುರೋಹಿತರಿಗಾಗಿ–ಪುರೋಹಿತರಿಗೋಸ್ಕರ” ಆಶಯದೊಂದಿಗೆ ವಿವಿಧ ವೈದಿಕ ವಿಷಯಗಳ ಕುರಿತು ಗೋಷ್ಠಿ ಹಾಗೂ ಪ್ರವಚನಗಳು ನಡೆದವು. ಪುರೋಹಿತ ಜಿ.ಎಸ್. ಪುರಂದರ ಆಚಾರ್ಯ ಮುನಿಯಾಲು ಅವರು “ಸಾರ್ಥಪುಣ್ಯಾಹ ವಾಚನಮ್”, ವಿ.ಬಿ.ಎಸ್. ಸಂಸ್ಕೃತ ವಿದ್ಯಾಪೀಠ, ಕೊಡಂಕೂರು, ಉಡುಪಿ ಇದರ ಪ್ರಾಚಾರ್ಯ ವಿದ್ವಾನ್ ಶ್ರೀಧರ ಭಟ್ಟ ಅವರು “ಸಂಸ್ಕಾರೇಷು ವೈದಿಕತ್ವಮ್” ಹಾಗೂ ಬೆಂಗಳೂರು ಡಿವಿವಿ, ಪಿಎಚ್‌ಡಿ ಪ್ರಾಧ್ಯಾಪಕ ಡಾ. ವಿವೇಕ ಜೆ. ಮತ್ತು ಪ್ರಾಧ್ಯಾಪಿಕೆ ಡಾ. ಕವಿತಾ ಸಿ. ಅವರು “ವೇದಃ ಆಯುರ್ವೇದಶ್ಚ” ವಿಷಯಗಳ ಕುರಿತು ಗೋಷ್ಠಿ–ಪ್ರವಚನ ನೀಡಿದರು.

ಸಭಾದ ಗೌರವಾಧ್ಯಕ್ಷ ನೆಲ್ಲಿಕಾರು ಶ್ರೀಧರ ಪುರೋಹಿತರು, ಶ್ರೀ ಮಠದ ವ್ಯವಸ್ಥಾಪಕ ಬಿ. ವಿಶ್ವನಾಥ ಪುರೋಹಿತರು, ಪ್ರಧಾನ ಸಂಚಾಲಕ ಎಲ್ಲೂರು ಶಿವಶಂಕರ ಪುರೋಹಿತರು, ಸಮ್ಮೇಳನಾಧಿಕಾರಿ ಜಗನ್ನಾಥ ಪುರೋಹಿತರು ಮೂಡುಬಿದಿರೆ ಹಾಗೂ ಬಜ್ಪೆ ಬಾಲಚಂದ್ರ ಪುರೋಹಿತರು ದೀಪ ಬೆಳಗಿಸಿ ಸಮ್ಮೇಳನಕ್ಕೆ ಚಾಲನೆ ನೀಡಿದರು.

ಸಮ್ಮೇಳನದಲ್ಲಿ ವೇದಾಧಾರಿತ ವಿಷಯಗಳು, ವರ್ತಮಾನ ಕಾಲದ ವೈದಿಕ ಕಾರ್ಯಕ್ರಮಗಳ ಸ್ಥಿತಿಗತಿ ಹಾಗೂ ವೈದಿಕರ ಸ್ಥಿತಿಗತಿ ಕುರಿತು ಚರ್ಚಿಸಲಾಯಿತು. ವಿವಿಧ ವಲಯಗಳ ಸಂಚಾಲಕರು, ಸಂಯೋಜಕರು ಹಾಗೂ ಹಿರಿಯ–ಕಿರಿಯ ಪುರೋಹಿತರ ಸಹಕಾರದಲ್ಲಿ ಸಮ್ಮೇಳನ ನಡೆಯಿತು.

ಸಮಾರೋಪದಲ್ಲಿ ಸ್ವಸಮಾಜದ ಅತೀ ಬಡತನದಲ್ಲಿರುವ ವಿದ್ಯಾಕಾಂಕ್ಷಿ ಏಳು ವಿದ್ಯಾರ್ಥಿಗಳಿಗೆ ‘ಸುಜ್ಞಾನ ನಿಧಿ’ಯಾಗಿ ಸುಮಾರು ₹26 ಸಾವಿರ ವಿದ್ಯಾರ್ಥಿವೇತನ ನೀಡಲಾಯಿತು. ಅಪಘಾತ, ಪ್ರಾಕೃತಿಕ ವಿಕೋಪ ಹಾಗೂ ತೀವ್ರ ನಿರ್ಗತಿಕ ರೋಗಿಗಳಿಗೆ ‘ಆರ್ಯನಿಧಿ’ ಹಾಗೂ ಸುಖಾಶ್ರಯ ವಂಚಿತರಿಗೆ ‘ಸೂರು ಯೋಜನೆ’ಯಡಿ ‘ಭಾಗ್ಯನಿಧಿ’ಯಾಗಿ 2025–26ನೇ ಸಾಲಿನಲ್ಲಿ ಸುಮಾರು ₹1,05,000 ನೀಡಲಾಯಿತು.

ಅಭಿಲಾಷ ಪುರೋಹಿತರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಧಾನ ಸಂಯೋಜಕ ಸೂಡ ಗಣೇಶ ಪುರೋಹಿತರು ವರದಿ ವಾಚಿಸಿದರು. ವಿವೇಕ ಪುರೋಹಿತ್ ಕೊಯ್ಯೂರು ಸಮ್ಮೇಳನದ ಅನುಭವ ಹಂಚಿಕೊಂಡರು. ಖಜಾಂಚಿ ಪದ್ಮನಾಭ ಪುರೋಹಿತ್ ಬಾಳಿಂಜ ಲೆಕ್ಕಪತ್ರ ಮಂಡಿಸಿದರು. ಪ್ರಧಾನ ಸಂಚಾಲಕ ಎಲ್ಲೂರು ಶಿವಶಂಕರ ಪುರೋಹಿತರು ಸ್ವಾಗತಿಸಿ ಸಭಾದ ಉದ್ದೇಶ, ಗುರಿ ಹಾಗೂ ಸಾಧನೆಯ ಕುರಿತು ಮಾತನಾಡಿದರು. ಸವಣಾಲು ಶಿವಪ್ರಸಾದ ಪುರೋಹಿತರು ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ಬ್ರಹ್ಮಾವರ ಗಣೇಶ ಪುರೋಹಿತರು ವಂದಿಸಿದರು.