ಮೂಡುಬಿದಿರೆ: ಶಾರ್ಜಾ–ದುಬೈ ಗಡಿಯ ಅನ್ಸಾರ್ ಮಾಲ್ ಸಮೀಪ ಭಾನುವಾರ ರಾತ್ರಿ ಸಂಭವಿಸಿದ ಕಾರು ಅಪಘಾತವು ಮೂಡುಬಿದಿರೆ ಮೂಲದ ಕುಟುಂಬವೊಂದಕ್ಕೆ ಅಸಹನೀಯ ನೋವು ತಂದಿದೆ.

ಶಿರ್ತಾಡಿ ಮೂಲದ ಹಕೀಮ್ ಅವರ ಐದು ವರ್ಷದ ಮಗಳು ಫಾತಿಮಾ ಅನಿಹಾ ಈ ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾಳೆ. ಶಾರ್ಜಾದಲ್ಲೇ ಉದ್ಯೋಗದಲ್ಲಿರುವ ಹಕೀಮ್ ಕುಟುಂಬದೊಂದಿಗೆ ವಾಸವಾಗಿದ್ದು, ಭಾನುವಾರ ರಾತ್ರಿ ಶಾಪಿಂಗ್ ಮುಗಿಸಿ ತಮ್ಮ ಕಾರಿನಲ್ಲಿ ಕುಳಿತುಕೊಳ್ಳಲು ಸಿದ್ಧರಾಗಿದ್ದ ವೇಳೆ ಹಿಂದಿನಿಂದ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಜೂನ್ 2ರಂದು ಐದು ವರ್ಷ ತುಂಬಬೇಕಿದ್ದ ಅನಿಹಾಳ ವೀಸಾ ಅವಧಿಯೂ ಅದೇ ದಿನ ಮುಗಿಯಬೇಕಾಗಿತ್ತು ಎಂಬುದು ಇನ್ನಷ್ಟು ವೇದನಾಕರ ಸಂಗತಿ. ಕುಟುಂಬದಲ್ಲಿ ಮೂವರು ಗಂಡು ಮಕ್ಕಳಿದ್ದು, ಈಕೆ ಏಕೈಕ ಪುತ್ರಿಯಾಗಿದ್ದಳು. ಬಾಲಕಿಯ ಅಂತ್ಯಕ್ರಿಯೆ ಶಾರ್ಜಾದಲ್ಲೇ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.