ಮೂಡುಬಿದಿರೆ: ಕಾರಿನಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮೂಡುಬಿದಿರೆ ಪೊಲೀಸರು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಬಂಧಿಸಿದ್ದಾರೆ.

ಹಂಡೇಲಿನ ಮಹಮ್ಮದ್ ಆರೀಪ್ ಮತ್ತು ಗಂಟಾಲಕಟ್ಟೆಯ ಇಮ್ರಾನ್ ಅಲಿಯಾಸ್ ಇಬ್ರಾಹಿಂ ಬಂಧಿತ ಆರೋಪಿಗಳು.

ಪಿಎಸ್‌ಐ ಕೃಷ್ಣಪ್ಪ ಮತ್ತು ಸಿಬ್ಬಂದಿ ಗಸ್ತು ಕರ್ತವ್ಯದಲ್ಲಿದ್ದಾಗ ಬೆಳುವಾಯಿ ಕಡೆಯಿಂದ ಮಾರ್ನಾಡು ಅಳಿಯೂರು ಕಡೆಗೆ ಬ್ರೀಜಾ ಕಾರಿನಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು. ಪಡುಮಾರ್ನಾಡು ಗ್ರಾಮದ ಗುಂಡುಕಲ್ಲು ಕ್ರಾಸ್ ಬಳಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದಾಗ ಕೆಎ 19 ಎಂಕೆ 4265 ಸಂಖ್ಯೆಯ ಕಾರು ಬಂದಿದೆ. ಪೊಲೀಸರು ಕಾರನ್ನು ನಿಲ್ಲಿಸಲು ಸೂಚಿಸಿದರೂ ಆರೋಪಿಗಳು ನಿಲ್ಲಿಸದೆ ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದಾರೆ.

ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಕಾರನ್ನು ಬೆನ್ನಟ್ಟಿದಾಗ ಆರೋಪಿಗಳು ಗುಂಡುಕಲ್ಲು 5 ಸೈಂಟ್ಸ್ ರಸ್ತೆಯ ಸಾಹುಲ್ ಹಮೀದ್ ಎಂಬುವರ ಮನೆ ಕಂಪೌಂಡ್ ಒಳಗೆ ವಾಹನ ನುಗ್ಗಿಸಿ ಓಡಿಹೋಗಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಬೆನ್ನಟ್ಟಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಕಾರನ್ನು ತಪಾಸಣೆ ನಡೆಸಿದಾಗ ಹಿಂಬದಿ ಸೀಟುಗಳನ್ನು ತೆಗೆದು ಅದರ ಮೇಲೆ ನೀಲಿ ಪ್ಲಾಸ್ಟಿಕ್ ಹಾಕಿ, ಗಂಡು ಕರುವೊಂದನ್ನು ಹಿಂಸಾತ್ಮಕವಾಗಿ ಹಗ್ಗದಿಂದ ಕಟ್ಟಿ ತುಂಬಿಸಿರುವುದು ಪತ್ತೆಯಾಗಿದೆ. ಕಳೆದ ಒಂದು ವಾರದಿಂದ ವಿವಿಧೆಡೆಗಳಿಂದ ಜಾನುವಾರುಗಳನ್ನು ಕಳ್ಳತನ ಮಾಡುತ್ತಿದ್ದ ಇವರು, ಗುಂಡುಕಲ್ಲು ನಿವಾಸಿ ಸಾಹುಲ್ ಹಮೀದ್ ಎಂಬುವರ ಮನೆಯ ಬಳಿ ಅವುಗಳನ್ನು ವಧೆ ಮಾಡಿ ಮಾಂಸ ಮಾರಾಟ ಮಾಡಲು ಅಥವಾ ಇತರರಿಗೆ ಮಾರಾಟ ಮಾಡಲು ಸಂಗ್ರಹಿಸಿಟ್ಟಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಪೊಲೀಸರು ಕರು ಹಾಗೂ ಸಾಗಾಟಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಮಹಮ್ಮದ್ ಆರೀಪ್ ವಿರುದ್ಧ ಈಗಾಗಲೇ ಬಜಪೆ, ಬಣಕಲ್ ಹಾಗೂ ಮೂಡುಬಿದಿರೆ ಠಾಣೆಗಳಲ್ಲಿ ಜಾನುವಾರು ಹತ್ಯೆ ತಡೆ ಕಾಯ್ದೆ ಸೇರಿದಂತೆ ನಾಲ್ಕು ಪ್ರಕರಣಗಳು ದಾಖಲಾಗಿವೆ. ಮತ್ತೊಬ್ಬ ಆರೋಪಿ ಇಮ್ರಾನ್ ವಿರುದ್ಧ ಮೂಡುಬಿದಿರೆ ಹಾಗೂ ಕಾರ್ಕಳ ನಗರ ಠಾಣೆಗಳಲ್ಲಿ ಎನ್.ಡಿ.ಪಿ.ಎಸ್, ಕೆ.ಪಿ ಆಕ್ಟ್ ಹಾಗೂ ಜಾನುವಾರು ಕಳ್ಳತನಕ್ಕೆ ಸಂಬಂಧಿಸಿದಂತೆ ಐದಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಇವೆ.