ಮೂಡುಬಿದಿರೆ: ಕಾರ್ಕಳದಿಂದ ಮೂಡುಬಿದಿರೆ ಕಡೆಗೆ ಪಿಕಪ್ ವಾಹನದಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಎರಡು ಕೋಣಗಳು ಹಾಗೂ ಒಂದು ಕರುವನ್ನು ಮೂಡುಬಿದಿರೆ ಪೊಲೀಸರು ಭಾನುವಾರ ರಕ್ಷಿಸಿದ್ದಾರೆ.
ಖಚಿತ ಮಾಹಿತಿಯ ಮೇರೆಗೆ ಆಲಂಗಾರು ಅಂಡರ್‌ಪಾಸ್ ಬಳಿ ವಾಹನವನ್ನು ತಡೆದು ಪರಿಶೀಲಿಸಿದ ವೇಳೆ ಜಾನುವಾರುಗಳನ್ನು ಸಾಗಿಸಲಾಗುತ್ತಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಕರ್ಕಳ ಮೂಲದ ಜಾಕ್ವೆಲಿನ್ ಹಾಗೂ ಜಾಕ್ಸನ್ ಎಂಬ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಜಾನುವಾರು ಸಾಗಾಟಕ್ಕೆ ಅಗತ್ಯ ದಾಖಲೆಗಳು ಹಾಗೂ ಪರವಾನಿಗೆಗಳನ್ನು ಹೊಂದಿರದ ಹಿನ್ನೆಲೆಯಲ್ಲಿ ಜಾನುವಾರುಗಳು ಮತ್ತು ಪಿಕಪ್ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಮೂಡುಬಿದಿರೆ ಪೊಲೀಸ್ ಠಾಣೆಯ ನಿರೀಕ್ಷಕ ರಾಜೇಂದ್ರ ಅವರ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ.