ಮೂಡುಬಿದಿರೆ: ಮುಂಬೈ ಉದ್ಯಮಿ, ತುಳುನಾಡ ಸೇನಾ ಸ್ಥಾಪಕ ಮಿಜಾರು ಹರಿಮಿನಾಕ್ಷಿ ದೋಟ ಸುರೇಶ್ ಶೆಟ್ಟಿ ತಮ್ಮ ಹುಟ್ಟೂರಾದ ಮಿಜಾರು ಮತ್ತು ತೋಡಾರು ಗ್ರಾಮಗಳ ಆರು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಒಟ್ಟು 1360 ವಿದ್ಯಾರ್ಥಿಗಳಿಗೆ ಪುಸ್ತಕ, ಕೊಡೆ ಮತ್ತು ಚೀಲಗಳನ್ನು ವಿತರಿಸಿದ್ದಾರೆ. ಇದರೊಂದಿಗೆ 200 ವಿದ್ಯಾರ್ಥಿಗಳಿಗೆ ತಲಾ ಐದು ಸಾವಿರ ರೂಪಾಯಿಯಂತೆ ಒಟ್ಟು ಹತ್ತು ಲಕ್ಷ ರೂಪಾಯಿ ಪ್ರೋತ್ಸಾಹ ಧನವನ್ನು ಹಸ್ತಾಂತರಿಸಿದ್ದಾರೆ.
ಬಂಗಬೆಟ್ಟು ಶಾಲಾ ಮೈದಾನದಲ್ಲಿ ಮಂಗಳವಾರ ನಡೆದ ಸಮಾರಂಭವನ್ನು ಶಾಸಕ ಉಮಾನಾಥ ಕೋಟ್ಯಾನ್ ಉದ್ಘಾಟಿಸಿ, ಸಮವಸ್ತ್ರ ವಿತರಿಸಿದರು.
ಬಳಿಕ ಮಾತನಾಡಿದ ಶಾಸಕರು, ಗಳಿಸಿದ ಸಂಪತ್ತನ್ನು ಸಮಾಜಕ್ಕೆ ಸದ್ವಿನಿಯೋಗ ಮಾಡಬೇಕು. ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದಾಗ ಕನ್ನಡ ಮಾಧ್ಯಮ ಶಾಲೆಗಳು ಸಶಕ್ತವಾಗುತ್ತವೆ. ಈ ನಿಟ್ಟಿನಲ್ಲಿ ಸುರೇಶ್ ಶೆಟ್ಟಿ ನೀಡಿದ ಕೊಡುಗೆ ಶ್ಲಾಘನೀಯ ಎಂದರು. ಇದೇ ಸಂದರ್ಭದಲ್ಲಿ ಮೂಡುಬಿದಿರೆ ಪ್ರೆಸ್ ಕ್ಲಬ್ ವತಿಯಿಂದ ನಿರ್ಮಾಣಗೊಳ್ಳುತ್ತಿರುವ ಪತ್ರಿಕಾ ಭವನಕ್ಕೆ ಒಂದು ಲಕ್ಷ ರೂಪಾಯಿ ಆರ್ಥಿಕ ನೆರವನ್ನು ಹಸ್ತಾಂತರಿಸಲಾಯಿತು. ನಿವೃತ್ತ ಪ್ರಾಂಶುಪಾಲ ಗುಣಪಾಲ ಕಡಂಬ, ತೆಂಕ ಮಿಜಾರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರೋಹಿಣಿ, ವಾಗ್ಮಿ ಶ್ರೀಕಾಂತ್ ಶೆಟ್ಟಿ, ಪ್ರಮುಖರಾದ ಹರಿಪ್ರಸಾದ್ ಶೆಟ್ಟಿ, ರಮೇಶ್ ಶೆಟ್ಟಿ, ಮಿಜಾರು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಚಂದ್ರು ಎಂ. ಎನ್, ಶಾಲಾ ಮುಖ್ಯ ಶಿಕ್ಷಕಿ ಅಪೋಲಿನ್ ಪಿಂಟೋ, ಸುರೇಶ್ ಶೆಟ್ಟಿ ಅವರ ತಾಯಿ ಮೀನಾಕ್ಷಿಝೆಡ್ ಪತ್ನಿ ರೇಖಾ, ತಂದೆ ಹರಿಯಪ್ಪ ಶೆಟ್ಟಿ, ಉಪಸ್ಥಿತರಿದ್ದರು. ಸತೀಶ್ ಹೊಸ್ಮಾರ್ ಕಾರ್ಯಕ್ರಮ ನಿರೂಸಿದರು.