ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ನಾಟಕ ವಿಭಾಗವಾದ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ತಂಡಕ್ಕೆ ಹೊಸ ಕಲಾವಿದರ ಆಯ್ಕೆಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಕನ್ನಡ ರಂಗಭೂಮಿಗೆ ಹಲವು ಗಮನಾರ್ಹ ನಾಟಕಗಳನ್ನು ನೀಡಿರುವ ಆಳ್ವಾಸ್ ರಂಗ ತಂಡವು, ರಂಗಾಭಿನಯ, ಮಾತುಗಾರಿಕೆ ಹಾಗೂ ತಾಂತ್ರಿಕ ಕ್ಷೇತ್ರಗಳಲ್ಲಿ ತರಬೇತಿ ಪಡೆದು ವೃತ್ತಿಪರ ನಾಟಕ ತಂಡದೊಂದಿಗೆ ಕಾರ್ಯನಿರ್ವಹಿಸಲು ಆಸಕ್ತಿ ಹೊಂದಿರುವ ಕಲಾವಿದರಿಗೆ ಅವಕಾಶ ಕಲ್ಪಿಸಿದೆ.
ಅರ್ಜಿದಾರರು ಒಂದು ವರ್ಷದ ರಂಗ ಶಿಕ್ಷಣ ಪದವಿ ಪಡೆದಿರಬೇಕು ಅಥವಾ ಕನಿಷ್ಠ ನಾಲ್ಕು ಅಥವಾ ಐದು ನಾಟಕಗಳಲ್ಲಿ ಅಭಿನಯಿಸಿದ ಅನುಭವ ಹೊಂದಿರಬೇಕು. 20ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಆಸಕ್ತರು ಜೂನ್ 17ರೊಳಗೆ ಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಮೂಡುಬಿದಿರೆ, ದಕ್ಷಿಣ ಕನ್ನಡ ಜಿಲ್ಲೆ ಎಂಬ ವಿಳಾಸಕ್ಕೆ ಅರ್ಜಿ ಕಳುಹಿಸಬಹುದು.
ಸಂದರ್ಶನದ ಮೂಲಕ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಉಚಿತ ಊಟ, ವಸತಿ ಸೌಲಭ್ಯದ ಜೊತೆಗೆ ಪ್ರತಿಭೆಗೆ ಅನುಗುಣವಾಗಿ ಮಾಸಿಕ ವೇತನ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಜೀವನ್ ರಾಂ ಸುಳ್ಯ ಅವರನ್ನು 9448215946 ಸಂಖ್ಯೆಯಲ್ಲಿ ಸಂಪರ್ಕಿಸಬಹುದು ಎಂದು ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.