ಮೂಡುಬಿದಿರೆ: ಮೆಸ್ಕಾಂ ವ್ಯಾಪ್ತಿಯ ವಿದ್ಯುತ್ ವಿತರಣೆ ಜವಾಬ್ದಾರಿಯನ್ನು ಟಾಟಾ ಪವರ್ ಕಂಪನಿ ಲಿಮಿಟೆಡ್‌ಗೆ ವಹಿಸುವುದನ್ನು ವಿರೋಧಿಸಿ, ಕರ್ನಾಟಕ ವಿದ್ಯುತ್ ಶಕ್ತಿ ನಿಯಂತ್ರಣ ಆಯೋಗಕ್ಕೆ (ಕೆಇಆರ್‌ಸಿ) ಜೂನ್ 23ರ ಒಳಗಾಗಿ ಆಕ್ಷೇಪಣೆ ಸಲ್ಲಿಸಲು ಮೂಡುಬಿದಿರೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ.

ವಕೀಲ, ರೈತ ಮುಖಂಡ ಶಾಂತಿಪ್ರಸಾದ್ ಹೆಗ್ಡೆ ರೈತರ ಸಭೆಯಲ್ಲಿ ಮಾತನಾಡಿ, ಈ ನಿರ್ಧಾರದ ಹಿನ್ನೆಲೆಯಲ್ಲಿ, ಮೂಡುಬಿದಿರೆ ತಾಲೂಕಿನ ರೈತರಲ್ಲಿ ವ್ಯಾಪಕ ಜಾಗೃತಿ ಮೂಡಿಸಲು ಪ್ರತಿ ಗ್ರಾಮದಲ್ಲೂ ಮೆಸ್ಕಾಂ ಬಚಾವೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ವಿದ್ಯುತ್ ವಿತರಣೆಯನ್ನು ಖಾಸಗಿ ಕಂಪನಿಗೆ ನೀಡುವುದರಿಂದ ರೈತರಿಗೆ ಮತ್ತು ಸಾರ್ವಜನಿಕರಿಗೆ ಆಗುವ ತೊಂದರೆಗಳ ಬಗ್ಗೆ ಗ್ರಾಮೀಣ ಮಟ್ಟದಲ್ಲಿ ಜಾಗೃತಿ ಮೂಡಿಸುವುದು ಈ ಆಂದೋಲನದ ಮುಖ್ಯ ಉದ್ದೇಶವಾಗಿದೆ ಎಂದರು.

ಸಭೆಯಲ್ಲಿ ಕಿಸಾನ್ ಜಿಲ್ಲಾ ಉಪಾಧ್ಯಕ್ಷ ಜಯಾನಂದ ನಾಯಕ್, ಜಿಲ್ಲಾ ಕಾರ್ಯದರ್ಶಿ ಪ್ರವೀಣ್ ಭಂಡಾರಿ, ವಿವಿಧ ಗ್ರಾಮಗಳ ಅಧ್ಯಕ್ಷರುಗಳು, ಕಾರ್ಯದರ್ಶಿಗಳು ಹಾಗೂ ತಾಲೂಕು ಮಹಿಳಾ ಪ್ರಮುಖರು ಉಪಸ್ಥಿತರಿದ್ದರು.