ಮೂಡುಬಿದಿರೆ: ಸಹಕಾರ ಕ್ಷೇತ್ರದಲ್ಲಿ ನಿರಂತರ ಸಾಧನೆ ಮಾಡುತ್ತಿರುವ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘಕ್ಕೆ ಆರೋಗ್ಯ ವಿಮಾ ಕ್ಷೇತ್ರದಲ್ಲಿನ ಅತ್ಯುತ್ತಮ ಕಾರ್ಯಕ್ಕಾಗಿ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ ಲಭಿಸಿದೆ. ಥೈಲ್ಯಾಂಡ್‌ನ ಬ್ಯಾಂಕಾಕ್‌ನಲ್ಲಿ ನಡೆದ ಮಣಿಪಾಲ್ ಸಿಗ್ನ ಹೆಲ್ತ್ ಇನ್ಶೂರೆನ್ಸ್ ಕಂಪನಿಯ ‘ಲಕ್ಷ್ಯ–2026’ ಪ್ರತಿಷ್ಠಿತ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಈ ಗೌರವವನ್ನು ಸಂಘ ತನ್ನದಾಗಿಸಿಕೊಂಡಿದೆ.

ಮಣಿಪಾಲ್ ಸಿಗ್ನ ಹೆಲ್ತ್ ಇನ್ಶೂರೆನ್ಸ್ ಕಂಪನಿಯ ರಿಟೇಲ್ ವ್ಯವಹಾರ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡು, ಆರೋಗ್ಯ ವಿಮಾ ಯೋಜನೆಯ ಗುರಿಯನ್ನು ಮೀರಿದ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಣಿಪಾಲ್ ಸಿಗ್ನ ಹೆಲ್ತ್ ಇನ್ಶೂರೆನ್ಸ್ ಕಂಪನಿ ಇಂಡಿಯಾದ ಮುಖ್ಯಸ್ಥ ಶಶಾಂಕ್ ಚಾಪೆಕರ್ ಹಾಗೂ ಏಜೆನ್ಸಿ ವಿಸ್ತರಣಾ ವಿಭಾಗದ ಮುಖ್ಯಸ್ಥ ಪ್ರಸಾದ್ ಶೆಟ್ಟಿ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ದಕ್ಷಿಣ ವಲಯ ಮುಖ್ಯಸ್ಥ ದರ್ವೇಶ್ ಮೊಹಮ್ಮದ್, ಸೌತ್ ಇಂಡಿಯಾ ಏಜೆನ್ಸಿ ಮುಖ್ಯಸ್ಥ ವಿಶಾಲ್ ಸುರನ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಬ್ಯಾಂಕಿಂಗ್ ಸೇವೆಗಳ ಜೊತೆಗೆ ಆರೋಗ್ಯ ಕ್ಷೇತ್ರದಲ್ಲಿಯೂ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿದ್ದು, ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ವಿಶೇಷ ಆದ್ಯತೆ ನೀಡುತ್ತಿದೆ. ಸಂಘದ ವಿವಿಧ ಶಾಖೆಗಳಲ್ಲಿ ವಾರ್ಷಿಕೋತ್ಸವದ ಅಂಗವಾಗಿ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುತ್ತಿದ್ದು, ಇದುವರೆಗೆ ಒಟ್ಟು 110 ಉಚಿತ ಆರೋಗ್ಯ ಶಿಬಿರಗಳು ನಡೆದಿವೆ. ಈ ಶಿಬಿರಗಳ ಮೂಲಕ ಕಡುಬಡವರಿಗೆ ಉಚಿತ ಔಷಧ ವಿತರಣೆ, ಆರೋಗ್ಯ ತಪಾಸಣೆ, ದಂತ ತಪಾಸಣೆ ಹಾಗೂ ಚಿಕಿತ್ಸೆ, ಉಚಿತ ಆರೋಗ್ಯ ಕಾರ್ಡ್ ವಿತರಣೆ ಸೇರಿದಂತೆ ವಿವಿಧ ಸೇವೆಗಳನ್ನು ಒದಗಿಸಲಾಗಿದೆ. ಅಲ್ಲದೆ, 950ಕ್ಕೂ ಹೆಚ್ಚು ಕಣ್ಣಿನ ಶಸ್ತ್ರಚಿಕಿತ್ಸೆಗಳು ಹಾಗೂ 21 ಸಾವಿರಕ್ಕೂ ಅಧಿಕ ಉಚಿತ ಕನ್ನಡಕಗಳನ್ನು ವಿತರಿಸಲಾಗಿದೆ.

ಸಂಘವು ವಿಮಾ ಕ್ಷೇತ್ರದ 10ಕ್ಕೂ ಹೆಚ್ಚು ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಆರೋಗ್ಯ, ವಾಹನ ಹಾಗೂ ಜೀವ ವಿಮಾ ಸೇವೆಗಳನ್ನು ಸ್ಪರ್ಧಾತ್ಮಕ ದರದಲ್ಲಿ ಸದಸ್ಯರಿಗೆ ಒದಗಿಸುತ್ತಿದೆ. ಇದರ ಪ್ರಯೋಜನವನ್ನು ಸಾವಿರಾರು ಗ್ರಾಹಕರು ಪಡೆದಿದ್ದಾರೆ. ಆರೋಗ್ಯ ವಿಮಾ ಯೋಜನೆಯ ಗುರಿಯನ್ನು ಮೀರಿದ ಸಾಧನೆಗಾಗಿ ಸಂಘವು ಸತತ 10 ವರ್ಷಗಳಿಂದ ವಿವಿಧ ಪ್ರಶಸ್ತಿಗಳನ್ನು ಪಡೆದು ತನ್ನ ಸಾಧನೆಯನ್ನು ಮುಂದುವರಿಸಿದೆ.