ಮೂಡುಬಿದಿರೆ: ಇಂದಿನ ಯಾಂತ್ರಿಕ ಜೀವನದಲ್ಲಿ ಮಾನವೀಯ ಮೌಲ್ಯಗಳು ಕ್ಷೀಣಿಸುತ್ತಿವೆ ಎಂಬ ಮಾತುಗಳು ಕೇಳಿಬರುತ್ತಿರುವ ನಡುವೆಯೇ, ಪಾಲಡ್ಕ ಗ್ರಾಮದಲ್ಲಿ ಮಾನವೀಯತೆಯ ಅಪರೂಪದ ನಿದರ್ಶನವೊಂದು ಸಮಾಜಕ್ಕೆ ಮಾದರಿಯಾಗಿದೆ. ಕಳೆದ ಎರಡು ವರ್ಷಗಳಿಂದ ಏಕಾಂಗಿಯಾಗಿ ಬದುಕುತ್ತಿರುವ ಜಾನ್ ಫೆರ್ನಾಂಡಿಸ್ ಅವರ ಜೀವನಕ್ಕೆ ಸ್ಥಳೀಯ ಕುಟುಂಬ, ಸಮಾಜಸೇವಕರು ಹಾಗೂ ಸಂಘಟನೆಗಳು ನಿರಂತರವಾಗಿ ಆಸರೆಯಾಗಿವೆ.
ಮಾತನಾಡಲು ಹಾಗೂ ಕೇಳಲು ಅಸಮರ್ಥರಾಗಿರುವ ಜಾನ್ ಫೆರ್ನಾಂಡಿಸ್ ಅವರು ಹಳೆಯ ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದಾರೆ. ಜೀವನದ ಅನೇಕ ಸಂಕಷ್ಟಗಳ ನಡುವೆ ದಿನನಿತ್ಯದ ಆಹಾರ ಮತ್ತು ಅಗತ್ಯ ಸೌಲಭ್ಯಗಳ ಕೊರತೆಯನ್ನು ಎದುರಿಸುತ್ತಿದ್ದ ಅವರ ಪರಿಸ್ಥಿತಿಯನ್ನು ಗಮನಿಸಿದ ಸಮಾಜಸೇವಕ ಪ್ರಕಾಶ್ ಜೆ. ಶೆಟ್ಟಿಗಾರ್ ಅವರು ‘ಹೆಲ್ಪಿಂಗ್ ಫ್ರೆಂಡ್ಸ್ ಇಸ್ರೇಲ್’ ತಂಡದ ಗಮನಕ್ಕೆ ತಂದಿದ್ದರು. ಬಳಿಕ ತಂಡ ಸ್ಥಳಕ್ಕೆ ಭೇಟಿ ನೀಡಿ ವಾಸ್ತವ ಸ್ಥಿತಿಯನ್ನು ಪರಿಶೀಲಿಸಿತು.
ಆರಂಭಿಕ ಹಂತದಲ್ಲಿ ಜಾನ್ ಅವರಿಗೆ ಅಗತ್ಯ ದಿನಸಿ ಸಾಮಗ್ರಿಗಳನ್ನು ಒದಗಿಸುವ ಮೂಲಕ ನೆರವು ಆರಂಭಗೊಂಡಿತು. ಬಳಿಕ ಅವರ ಬದುಕಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮತ್ತಷ್ಟು ಪ್ರಯತ್ನಗಳು ನಡೆದವು.
ಬಾಬು ಪೂಜಾರಿ ಕುಟುಂಬದ ಅನ್ನದಾಸೋಹ ಜಾನ್ ಫೆರ್ನಾಂಡಿಸ್ ಅವರ ಮನೆ ಸಮೀಪದಲ್ಲೇ ವಾಸಿಸುವ ಬಾಬು ಪೂಜಾರಿ ಕುಟುಂಬವು ಕಳೆದ ಒಂದೂವರೆ ವರ್ಷಗಳಿಂದ ಪ್ರತಿದಿನ ಬೆಳಿಗ್ಗೆ ಉಪಹಾರ, ಮಧ್ಯಾಹ್ನದ ಊಟ, ಸಂಜೆ ಚಹಾ ಹಾಗೂ ರಾತ್ರಿ ಊಟವನ್ನು ಒದಗಿಸುತ್ತಿದೆ. ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ ನಡೆಯುತ್ತಿರುವ ಈ ಸೇವೆ ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದೆ. ಜಾನ್ ಅವರ ದಿನನಿತ್ಯದ ಆಹಾರ ವ್ಯವಸ್ಥೆಯ ಸಂಪೂರ್ಣ ಹೊಣೆಯನ್ನು ಈ ಕುಟುಂಬವೇ ಹೊತ್ತುಕೊಂಡಿದ್ದು, ಮಾನವೀಯ ಸೇವೆಯ ನಿಜವಾದ ಅರ್ಥವನ್ನು ತೋರಿಸಿದೆ.
ಹೆಲ್ಪಿಂಗ್ ಫ್ರೆಂಡ್ಸ್ ಇಸ್ರೇಲ್ ಹಾಗೂ ಲಯನ್ಸ್ ಕ್ಲಬ್ ಬೆಂಬಲ ಜಾನ್ ಅವರಿಗೆ ಅಗತ್ಯವಾಗುವ ದಿನಸಿ ಸಾಮಗ್ರಿಗಳನ್ನು ಪ್ರತಿ ತಿಂಗಳು ‘ಹೆಲ್ಪಿಂಗ್ ಫ್ರೆಂಡ್ಸ್ ಇಸ್ರೇಲ್’ ತಂಡ ಒದಗಿಸುತ್ತಿದೆ. ಈ ಕಾರ್ಯಕ್ಕೆ ‘ಲಯನ್ಸ್ ಕ್ಲಬ್ ಅಲಂಗಾರ್’ ಸಹ ಕೈಜೋಡಿಸಿದ್ದು, ಅಗತ್ಯ ವಸ್ತುಗಳನ್ನು ತಲುಪಿಸುವ ಜವಾಬ್ದಾರಿಯನ್ನು ನಿರ್ವಹಿಸುತ್ತಿದೆ. ಜಾನ್ ಅವರ ಮನೆಗೆ ವಾಹನ ಸಂಚಾರದ ಸೌಲಭ್ಯ ಇಲ್ಲದ ಕಾರಣ, ಸುಮಾರು ಒಂದು ಕಿಲೋಮೀಟರ್ ದೂರ ಕಾಲ್ನಡಿಗೆಯಲ್ಲೇ ಸಾಗಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿಯೂ ಲಯನ್ಸ್ ಕ್ಲಬ್ ಅಲಂಗಾರ್ ಅಧ್ಯಕ್ಷ ಅಮಿತ್ ಅವರು ಸ್ವತಃ ಸಾಮಗ್ರಿಗಳನ್ನು ಹೊತ್ತುಕೊಂಡು ಹೋಗಿ ನೆರವು ನೀಡುತ್ತಿರುವುದು ಗಮನಾರ್ಹ.
ದಾನಿಗಳ ಸಹಕಾರದಿಂದ ಬಲಗೊಂಡ ಸೇವೆ ಈ ಮಾನವೀಯ ಕಾರ್ಯಕ್ಕೆ ಸ್ಥಳೀಯ ಪಲ್ಲವಿ ಜನರಲ್ ಸ್ಟೋರ್ ಅಗತ್ಯ ದಿನಸಿ ಸಾಮಗ್ರಿಗಳನ್ನು ರಿಯಾಯಿತಿ ದರದಲ್ಲಿ ಒದಗಿಸುವ ಮೂಲಕ ಬೆಂಬಲ ನೀಡುತ್ತಿದೆ. ಹಲವು ದಾನಿಗಳು ಮತ್ತು ಸಮಾಜಮುಖಿ ವ್ಯಕ್ತಿಗಳ ಸಹಕಾರದಿಂದ ಈ ಸೇವಾ ಕಾರ್ಯ ನಿರಂತರವಾಗಿ ಸಾಗುತ್ತಿದೆ.
ಮಾನವೀಯತೆಯ ಜೀವಂತ ಸಾಕ್ಷಿ “ಸಮಾಜದಲ್ಲಿ ಮಾನವೀಯ ಮೌಲ್ಯಗಳು ಇನ್ನೂ ಜೀವಂತವಾಗಿವೆ ಎಂಬುದಕ್ಕೆ ಜಾನ್ ಫೆರ್ನಾಂಡಿಸ್ ಅವರ ಬದುಕಿಗೆ ಆಸರೆಯಾಗಿರುವ ಈ ಸೇವಾ ಕಾರ್ಯವೇ ಸಾಕ್ಷಿ” ಎಂದು ಸ್ಥಳೀಯ ನಿವಾಸಿ ಜಗದೀಶ್ ಪೂಜಾರಿ ಅಭಿಪ್ರಾಯಪಟ್ಟಿದ್ದಾರೆ.
‘ಹೆಲ್ಪಿಂಗ್ ಫ್ರೆಂಡ್ಸ್ ಇಸ್ರೇಲ್’ ಸಂಸ್ಥಾಪಕ ಸುನಿಲ್ ಮೆಂಡೋನ್ಸ್ ಮಾತನಾಡಿ, “ಕಷ್ಟದಲ್ಲಿರುವವರಿಗೆ ನೆರವಾಗುವುದು ನಮ್ಮ ಸಾಮಾಜಿಕ ಕರ್ತವ್ಯ. ಜಾನ್ ಅವರ ಅಗತ್ಯ ಇರುವವರೆಗೆ ಈ ಬೆಂಬಲ ಮುಂದುವರಿಯಲಿದೆ. ಯಾವುದೇ ಪ್ರಚಾರದ ಉದ್ದೇಶವಿಲ್ಲದೆ ನಡೆಯುತ್ತಿರುವ ಈ ಸೇವೆಗೆ ಕೈಜೋಡಿಸಿದ ಎಲ್ಲ ದಾನಿಗಳಿಗೂ ನಾವು ಕೃತಜ್ಞರಾಗಿದ್ದೇವೆ” ಎಂದು ಹೇಳಿದರು.
ಪಾಲಡ್ಕ ಗ್ರಾಮದಲ್ಲಿ ಜಾನ್ ಫೆರ್ನಾಂಡಿಸ್ ಅವರಿಗಾಗಿ ನಡೆಯುತ್ತಿರುವ ಈ ಮಾನವೀಯ ಸೇವೆ ಸಮಾಜಕ್ಕೆ ಮಾದರಿಯಾಗಿದ್ದು, ಸಂಕಷ್ಟದಲ್ಲಿರುವವರ ಬದುಕಿನಲ್ಲಿ ಆಶಾಕಿರಣ ಮೂಡಿಸಿದೆ.
ವಿಶೇಷ ವರದಿ : ಯಶೋಧರ ವಿ. ಬಂಗೇರ