ಮೂಡುಬಿದಿರೆ: ಶಿಕ್ಷಣ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಪರಿಣಾಮಕಾರಿ ಬಳಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಫೋರ್‌ಸೈಟ್ ಲರ್ನಿಂಗ್ ಪ್ರೈವೇಟ್ ಲಿಮಿಟೆಡ್ ಹಾಗೂ ಜಿ-ಟೆಕ್ ಕಂಪ್ಯೂಟರ್ ಎಜುಕೇಶನ್, ಮೂಡುಬಿದಿರೆ ಇವರ ಸಂಯುಕ್ತ ಆಶ್ರಯದಲ್ಲಿ ಶಿಕ್ಷಕರಿಗಾಗಿ "AI Capacity Building Program" ತರಬೇತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಮೈಟ್ ಇಂಜಿನಿಯರಿಂಗ್ ಕಾಲೇಜಿನ ಐಎಸ್‌ಇ ವಿಭಾಗದ ಮುಖ್ಯಸ್ಥ ಮಂಜುನಾಥ್ ಹೆಚ್. ಉದ್ಘಾಟಿಸಿದರು. ಡಿಜಿಟಲ್ ಯುಗದಲ್ಲಿ ಕೃತಕ ಬುದ್ಧಿಮತ್ತೆಯ ಪಾತ್ರ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಗುಣಾತ್ಮಕ ಬದಲಾವಣೆ ತರಬೇಕೆಂದು ಅವರು ಹೇಳಿದರು.
ಫೋರ್‌ಸೈಟ್ ಲರ್ನಿಂಗ್ ಪ್ರೈವೇಟ್ ಲಿಮಿಟೆಡ್‌ನ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕ ದೀಪಕ್ ರಾಜ್ ಮುಖ್ಯ ತರಬೇತುದಾರರಾಗಿ ಭಾಗವಹಿಸಿ ಕೃತಕ ಬುದ್ಧಿಮತ್ತೆಯ ಮೂಲಭೂತ ಅಂಶಗಳು, ಶಿಕ್ಷಣ ಕ್ಷೇತ್ರದಲ್ಲಿನ ಅದರ ಅನ್ವಯಿಕೆ, ವಿವಿಧ AI ಉಪಕರಣಗಳ ಬಳಕೆ ಹಾಗೂ ಪರಿಣಾಮಕಾರಿ ಪ್ರಾಂಪ್ಟಿಂಗ್ ತಂತ್ರಗಳ ಕುರಿತು ಮಾಹಿತಿ ನೀಡಿದರು. ತರಬೇತಿಯ ವೇಳೆ ಶಿಕ್ಷಕರು ವಿವಿಧ AI ಸಾಧನಗಳನ್ನು ಪ್ರಾಯೋಗಿಕವಾಗಿ ಬಳಸುವ ಅವಕಾಶ ಪಡೆದರು. ಸಮಾರೋಪ ಸಮಾರಂಭದಲ್ಲಿ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಕುರಿಯಾನ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ಶಿಕ್ಷಕರ ವೃತ್ತಿಪರ ಬೆಳವಣಿಗೆಯಲ್ಲಿ ಕೃತಕ ಬುದ್ಧಿಮತ್ತೆಯ ಮಹತ್ವವನ್ನು ವಿವರಿಸಿದರು. ಇದೇ ಸಂದರ್ಭದಲ್ಲಿ ಫೋರ್‌ಸೈಟ್ ಲರ್ನಿಂಗ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕರಾದ ಧೀರಜ್ ಉದ್ಯಾವರ ಹಾಗೂ ಅರುಣ್ ಪಿಂಟೋ ಉಪಸ್ಥಿತರಿದ್ದರು.
ಜಿ-ಟೆಕ್ ಕಂಪ್ಯೂಟರ್ ಎಜುಕೇಶನ್, ಮೂಡುಬಿದಿರೆಯ ಕೇಂದ್ರ ನಿರ್ದೇಶಕ ಮಧುಸೂದನ್ ಶಿಂಧೆ ಕಾರ್ಯಕ್ರಮವನ್ನು ನಿರೂಪಿಸಿದರು. ವಿವಿಧ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ತರಬೇತಿಯ ಪ್ರಯೋಜನ ಪಡೆದರು.