ಮೂಡುಬಿದಿರೆ: ಆಟೋ ರಿಕ್ಷಾ ದರ ಪರಿಷ್ಕರಿಸುವಂತೆ ಆಟೋ ಚಾಲಕ ಮಾಲಕರ ಸಂಘವು ಮೂಡುಬಿದಿರೆ ತಹಶೀಲ್ದಾರ್ ಮುಖಾಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು.
ಇಂಧನ, ಇಂಜಿನ್ ಆಯಿಲ್, ಬಿಡಿಭಾಗಗಳು, ಎಫ್‌ಸಿ ಹಾಗೂ ವಿಮೆ ವೆಚ್ಚ ಹೆಚ್ಚಿರುವುದರಿಂದ ಪ್ರಸ್ತುತ ಕನಿಷ್ಠ ಬಾಡಿಗೆಯಾದ 35 ರೂಪಾಯಿಯನ್ನು 50 ರೂಪಾಯಿಗೆ ಹಾಗೂ ಪ್ರತಿ ಕಿಲೋಮೀಟರ್‌ಗೆ 20 ರೂಪಾಯಿಯನ್ನು 30 ರೂಪಾಯಿಗೆ ಹೆಚ್ಚಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.
ಇದೇ ವೇಳೆ, ಗ್ರಾಮಾಂತರ ಆಟೋಗಳು ನಗರ ವ್ಯಾಪ್ತಿಯಲ್ಲಿ ನಿಯಮ ಉಲ್ಲಂಘಿಸಿ ವಾಹನ ನಿಲುಗಡೆ ಮಾಡುವುದು ಹಾಗೂ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರನ್ನು ಸಾಗಿಸುವುದರಿಂದ ನಗರ ಆಟೋ ಚಾಲಕರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಮೂಡುಬಿದಿರೆ ಪೊಲೀಸ್ ಠಾಣೆಗೆ ದೂರು ನೀಡಲಾಯಿತು.
ಈ ಸಂದರ್ಭದಲ್ಲಿ ದೀಪಕ್ ರಾಜ್ ಕೊಡಂಗಲ್ಲು, ನವೀನ್ ಒಂಟಿಕಟ್ಟೆ, ಸಂತೋಷ ಬಾಕ್ಯಾರ್ ಕೊಡಿ, ವಿಕ್ಟರ್ ಪೆರ್ನಾಂಡಿಸ್, ಸುರೇಶ್ ಕೋಟ್ಯಾನ್, ಜಯರಾಮ್ ರಾವ್ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.