ಮೂಡುಬಿದಿರೆ: ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳ ಅಪಪ್ರಚಾರಗಳಿಂದ ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಆತಂಕ ಮೂಡುತ್ತಿದ್ದು, ಸಾಧಿಸುವ ಛಲವಿದ್ದರೆ ಭಾಷಾ ಮಾಧ್ಯಮ ಅಡ್ಡಿಯಾಗುವುದಿಲ್ಲ. ಮುಂದಿನ ಶಿಕ್ಷಣ ಹಂತಗಳಲ್ಲಿ ಇಂಗ್ಲಿಷ್ ಕಲಿಯಲು ಅವಕಾಶಗಳಿರುವುದರಿಂದ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಕಲಿಯಬೇಕು ಎಂದು ಮೂಡುಬಿದಿರೆ ವಕೀಲರ ಸಂಘದ ಅಧ್ಯಕ್ಷ ಶರತ್ ಶೆಟ್ಟಿ ಹೇಳಿದರು.
ಕರಾವಳಿ ಕೇಸರಿ ಸೇವಾ ಟ್ರಸ್ಟ್‌ನ ಬೆದ್ರ, ಕರಾವಳಿ ಕೇಸರಿ ಮಹಿಳಾ ಘಟಕದ ಆಶ್ರಯದಲ್ಲಿ ದರೆಗುಡ್ಡೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಟ್ರಸ್ಟ್ ವತಿಯಿಂದ ಶರತ್ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಕರಾವಳಿ ಕೇಸರಿ ಸೇವಾ ಟ್ರಸ್ಟ್‌ನ ಸ್ಥಾಪಕ ಅಧ್ಯಕ್ಷ ಸಮಿತ್ ರಾಜ್ ದರೆಗುಡ್ಡೆ, ಗೌರವಾಧ್ಯಕ್ಷ ಅಶೋಕ್ ಶೆಟ್ಟಿ ಬೇಲೊಟ್ಟು, ವಿದ್ಯಾರ್ಥಿ ಪೋಷಕರ ಸಂಘದ ಅಧ್ಯಕ್ಷೆ ಗೀತಾ, ಕರಾವಳಿ ಕೇಸರಿ ಘಟಕದ ಸದಸ್ಯರು ಹಾಗೂ ಪೋಷಕರು ಉಪಸ್ಥಿತರಿದ್ದರು. ಶಿಕ್ಷಕಿ ಅಕ್ಷತಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಜಯಶ್ರೀ ರಾಮನಾಯಕ್ ವಂದಿಸಿದರು.