ಮೂಡುಬಿದಿರೆ: ಕಲ್ಲಬೆಟ್ಟುವಿನ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ ಜೂನ್ 20ರಂದು ನಡೆಯಿತು. ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು, ಮತದಾನದ ಹಕ್ಕಿನ ಅರಿವು ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸುವ ಉದ್ದೇಶದಿಂದ ಚುನಾವಣೆಯನ್ನು ಆಯೋಜಿಸಲಾಗಿತ್ತು.

ಭಾರತದ ಸಾರ್ವತ್ರಿಕ ಚುನಾವಣೆ ಮಾದರಿಯಲ್ಲೇ ಈ ಚುನಾವಣೆ ನಡೆಸಲಾಗಿದ್ದು, ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ (ಇವಿಎಂ) ಮೂಲಕ ಮತದಾನ ಪ್ರಕ್ರಿಯೆ ಜರುಗಿತು. ವಿದ್ಯಾರ್ಥಿಗಳಿಗೆ ಮತದಾನದ ವಿಧಾನ, ಅಭ್ಯರ್ಥಿಗಳ ಆಯ್ಕೆ ಹಾಗೂ ಮತ ಚಲಾಯಿಸುವ ಕ್ರಮಗಳ ಕುರಿತು ಮಾಹಿತಿ ನೀಡಲಾಯಿತು. ಬಳಿಕ ಮತಗಟ್ಟೆಗಳಲ್ಲಿ ವಿದ್ಯಾರ್ಥಿಗಳು ಸರದಿಯಲ್ಲಿ ನಿಂತು ಮತ ಚಲಾಯಿಸಿದರು. ಇವಿಎಂ ಮೂಲಕ ನಡೆದ ಮತದಾನವು ವಿದ್ಯಾರ್ಥಿಗಳಿಗೆ ನೈಜ ಚುನಾವಣೆಯ ಅನುಭವವನ್ನು ನೀಡಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್, ಪ್ರಜಾಪ್ರಭುತ್ವದ ಯಶಸ್ಸು ಜಾಗೃತ ಮತದಾರರ ಮೇಲೆ ಅವಲಂಬಿತವಾಗಿದೆ. ವಿದ್ಯಾರ್ಥಿ ಜೀವನದಲ್ಲಿಯೇ ಮತದಾನದ ಮಹತ್ವವನ್ನು ಅರಿತುಕೊಳ್ಳುವುದು ಅಗತ್ಯವಾಗಿದ್ದು, ಇಂತಹ ಚುನಾವಣೆಗಳು ವಿದ್ಯಾರ್ಥಿಗಳಲ್ಲಿ ನಾಯಕತ್ವ, ಜವಾಬ್ದಾರಿ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಳೆಸಲು ಸಹಕಾರಿಯಾಗುತ್ತವೆ ಎಂದು ಹೇಳಿದರು. ಸ್ಪರ್ಧಿಸಿದ ಅಭ್ಯರ್ಥಿಗಳು ಹಾಗೂ ಮತದಾರ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಮತದಾನ ಕೇಂದ್ರಕ್ಕೆ ಭೇಟಿ ನೀಡಿದ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಚುನಾವಣಾ ಪ್ರಕ್ರಿಯೆಯನ್ನು ವೀಕ್ಷಿಸಿ ವಿದ್ಯಾರ್ಥಿಗಳ ಶಿಸ್ತು ಮತ್ತು ಉತ್ಸಾಹವನ್ನು ಮೆಚ್ಚಿದರು. ಇಂತಹ ಪ್ರಜಾಪ್ರಭುತ್ವ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಜವಾಬ್ದಾರಿಯುತ ನಾಗರಿಕತ್ವದ ಗುಣಗಳನ್ನು ಬೆಳೆಸುತ್ತವೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಮೂಡುಬಿದಿರೆ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನವೀನ್ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಎಕ್ಸಲೆಂಟ್ ಶಾಲೆಯಲ್ಲಿ ಆಯೋಜಿಸಿದ ಚುನಾವಣಾ ಪ್ರಕ್ರಿಯೆಯನ್ನು ಪ್ರಶಂಸಿಸಿದ ಅವರು, ವಿದ್ಯಾರ್ಥಿಗಳಲ್ಲಿ ಪ್ರಜಾಸತ್ತಾತ್ಮಕ ಧ್ಯೇಯಗಳನ್ನು ಬೆಳೆಸುವಲ್ಲಿ ಶಾಲೆಯ ಪಾತ್ರವನ್ನು ಕೊಂಡಾಡಿದರು. ಶಾಲೆಯ ವಿದ್ಯಾರ್ಥಿನಿ ಮಾನ್ಯತಾ ಅವರ ಪೋಷಕ ಮಧುರ ಮತದಾನ ಕೇಂದ್ರಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳ ಪ್ರಜಾಪ್ರಭುತ್ವದ ಅರಿವು ಮತ್ತು ಚುನಾವಣಾ ಪ್ರಕ್ರಿಯೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಲೆಯ ಮುಖ್ಯ ಶಿಕ್ಷಕ ಶಿವಪ್ರಸಾದ್ ಭಟ್ ಮುಖ್ಯ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ ಚುನಾವಣಾ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಿಕೊಟ್ಟರು. ಉಪಮುಖ್ಯೋಪಾಧ್ಯಾಯ ಜಯಶೀಲ್ ಚುನಾವಣೆಯನ್ನು ಸಂಘಟಿಸಿ ಮತದಾನ ಪ್ರಕ್ರಿಯೆಯ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸಿದರು.

ಈ ಬಾರಿಯ ಶಾಲಾ ಸಂಸತ್ ಚುನಾವಣೆಯಲ್ಲಿ ಒಟ್ಟು 99.008 ಶೇಕಡಾ ಮತದಾನ ದಾಖಲಾಗಿದೆ ಎಂದು ಶಾಲಾ ಚುನಾವಣಾ ಆಯೋಗ ತಿಳಿಸಿದೆ. ಮತದಾನ ಪ್ರಕ್ರಿಯೆ ಪೂರ್ಣಗೊಂಡ ಎರಡು ದಿನಗಳ ಬಳಿಕ ಮತಎಣಿಕೆ ನಡೆದು ಫಲಿತಾಂಶ ಪ್ರಕಟಿಸಲಾಯಿತು. ವಿಜೇತ ವಿದ್ಯಾರ್ಥಿಗಳಾದ ರಿಷಿಕೇಶ್, ಯಶ್ಮಿತ್, ತನ್ವಿ ಮತ್ತು ನಿಹಾರಿಕ ಅವರನ್ನು ಅಭಿನಂದಿಸಲಾಯಿತು.