ಮೂಡುಬಿದಿರೆ: ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಶಿರ್ತಾಡಿಯ ಮೌಂಟ್ ಕಾರ್ಮೆಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯೋಗದ ಮಹತ್ವವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಕಾರ್ಯಕ್ರಮ ನಡೆಯಿತು.

ಉತ್ತಮ ಆರೋಗ್ಯವು ಯಶಸ್ವಿ ಜೀವನದ ಮೂಲಾಧಾರವಾಗಿದ್ದು, ದೈಹಿಕ ಹಾಗೂ ಮಾನಸಿಕ ಕ್ಷೇಮವನ್ನು ಕಾಪಾಡುವಲ್ಲಿ ಯೋಗ ಪ್ರಮುಖ ಪಾತ್ರ ವಹಿಸುತ್ತದೆ ಎಂಬ ಸಂದೇಶದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳಲ್ಲಿ ಆರೋಗ್ಯಕರ ಜೀವನಶೈಲಿ, ಏಕಾಗ್ರತೆ ಹಾಗೂ ಆತ್ಮವಿಶ್ವಾಸ ಬೆಳೆಸುವ ಉದ್ದೇಶದಿಂದ ವಿವಿಧ ಯೋಗ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು.

ಮೌಂಟ್ ಕಾರ್ಮೆಲ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಮಾನ್ವಿ ಸಂತೋಷ್ ಪೂಜಾರಿ ಯೋಗದ ಮಹತ್ವದ ಕುರಿತು ಮಾಹಿತಿ ನೀಡಿದರು. ಚಿತ್ರದುರ್ಗದಲ್ಲಿ ನಡೆದ ರಾಜ್ಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಚಾಂಪಿಯನ್ ಪಟ್ಟ ಪಡೆದಿರುವ ಅವರು, ಜಿಲ್ಲಾ ಮಟ್ಟದ ಹಲವು ಯೋಗ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಾಧನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಯೋಗಾಸನಗಳ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು.

ಬಿಂದು ಮ್ಯಾಕ್ಸಿಂ ಡಿಸೋಜ ಮಾತನಾಡಿ, ಯೋಗವು ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ನೆಮ್ಮದಿಯನ್ನು ನೀಡುವ ಪರಿಣಾಮಕಾರಿ ಸಾಧನವಾಗಿದೆ. ಪ್ರತಿಯೊಬ್ಬರೂ ಯೋಗವನ್ನು ದೈನಂದಿನ ಜೀವನದ ಭಾಗವನ್ನಾಗಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ವಿವಿಧ ಯೋಗಾಸನಗಳನ್ನು ಅಭ್ಯಾಸ ಮಾಡಿ ಯೋಗದ ಮಹತ್ವದ ಬಗ್ಗೆ ಅರಿವು ಪಡೆದರು.