ಮೂಡುಬಿದಿರೆ: ಚಲಿಸುತ್ತಿದ್ದ ಮಾರುತಿ ಸಿಯಾಜ್ ಕಾರಿಗೆ ಬೆಂಕಿ ಕಾಣಿಸಿಕೊಂಡು ವಾಹನ ಭಾಗಶಃ ಸುಟ್ಟ ಘಟನೆ ಸೋಮವಾರ ಸಂಜೆ ಮೂಡುಬಿದಿರೆ ಪೇಟೆಯಲ್ಲಿ ನಡೆದಿದೆ. ಕಾರಿನಲ್ಲಿದ್ದವರು ಸಮಯಪ್ರಜ್ಞೆಯಿಂದ ಹೊರಬಂದ ಪರಿಣಾಮ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಕೋಟೆಬಾಗಿಲಿನ ಮಸೂದು ಅವರು ಸೋಮವಾರ ಸಂಜೆ ಸುಮಾರು 4 ಗಂಟೆ ವೇಳೆಗೆ ಕುಟುಂಬದೊಂದಿಗೆ ಮೂಡುಬಿದಿರೆಗೆ ಬರುತ್ತಿದ್ದರು. ಈ ವೇಳೆ ಪುರಸಭೆಯ ಹಳೆಯ ಕಟ್ಟಡದ ಸಮೀಪ ಕಾರಿನ ಫಾಗ್ ಲೈಟ್ ಭಾಗದಲ್ಲಿ ಹೊಗೆ ಕಾಣಿಸಿಕೊಂಡಿದೆ.

ತಕ್ಷಣ ಕಾರನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಒಳಗಿದ್ದ ಪುಟ್ಟ ಮಕ್ಕಳು ಹಾಗೂ ಮಹಿಳೆಯರನ್ನು ಸುರಕ್ಷಿತವಾಗಿ ಹೊರಗೆ ಇಳಿಸಲಾಯಿತು. ಕೆಲವೇ ಕ್ಷಣಗಳಲ್ಲಿ ವಾಹನದಲ್ಲಿ ಬೆಂಕಿ ಜೋರಾಗಿ ವ್ಯಾಪಿಸಿ ಕಾರಿನ ಮುಂಭಾಗವನ್ನು ಆವರಿಸಿತು.

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಸಾರ್ವಜನಿಕರ ಸಹಕಾರದೊಂದಿಗೆ ಬೆಂಕಿಯನ್ನು ನಂದಿಸಿದರು. ಇದರಿಂದ ಬೆಂಕಿ ಇನ್ನಷ್ಟು ವ್ಯಾಪಿಸುವುದನ್ನು ತಡೆಯಲಾಯಿತು.