ಮೂಡುಬಿದಿರೆ: ಪ್ರತಿಭೆಗೆ ಸೂಕ್ತ ಮಾರ್ಗದರ್ಶನ ಮತ್ತು ನಿರಂತರ ಅಭ್ಯಾಸ ಸಿಕ್ಕರೆ ಸಾಧನೆಗೆ ವಯಸ್ಸಿನ ಮಿತಿ ಇರುವುದಿಲ್ಲ ಎಂಬುದನ್ನು ಮಾರ್ನಾಡಿನ ಗಾನವಿ ಪೂಜಾರಿ ತನ್ನ ಸಾಧನೆಯ ಮೂಲಕ ಸಾಬೀತುಪಡಿಸಿದ್ದಾಳೆ.
ಅಲಂಗಾರದ ಸೈಂಟ್ ಥೋಮಸ್ ಆಂಗ್ಲ ಮಾಧ್ಯಮ ಶಾಲೆಯ 7ನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಗಾನವಿ, ಶಿಕ್ಷಣದ ಜೊತೆಗೆ ವಿವಿಧ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ದಾಖಲಿಸಿ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾಳೆ.
ಕಲೆಯತ್ತ ಬಾಲ್ಯದಿಂದಲೇ ಒಲವು: ಸುರೇಂದ್ರ ಸಿ. ಪೂಜಾರಿ ಮತ್ತು ಆಶಾ ಸುರೇಂದ್ರ ಪೂಜಾರಿ ಅವರ ಪುತ್ರಿಯಾಗಿರುವ ಗಾನವಿ, ಸಂಗೀತ, ಯಕ್ಷಗಾನ, ನೃತ್ಯ, ಭಜನೆ, ಭಕ್ತಿಗೀತೆ, ಏಕಪಾತ್ರ ಅಭಿನಯ ಹಾಗೂ ಅಭಿನಯ ಕ್ಷೇತ್ರಗಳಲ್ಲಿ ನಿರಂತರ ತರಬೇತಿ ಪಡೆಯುತ್ತಿದ್ದಾಳೆ. ಶಾಲೆಯಲ್ಲಿಯೂ ಉತ್ತಮ ವಿದ್ಯಾರ್ಥಿನಿಯಾಗಿ ಹೆಸರು ಪಡೆದಿರುವ ಆಕೆ, ಪಠ್ಯೇತರ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಭಾಗವಹಿಸುತ್ತಿದ್ದಾಳೆ.
ಸ್ಪರ್ಧೆಗಳಲ್ಲೂ ನಿರಂತರ ಸಾಧನೆ ಛದ್ಮವೇಷ, ಕಥೆ ಹೇಳುವುದು, ಜಾನಪದ ಹಾಡು, ಭಾಷಣ, ಭಕ್ತಿಗೀತೆ, ಸಂಗೀತ ಹಾಗೂ ಏಕಪಾತ್ರ ಅಭಿನಯ ಸೇರಿದಂತೆ ಹಲವು ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ಪ್ರಶಂಸೆಗೆ ಪಾತ್ರಳಾಗಿದ್ದಾಳೆ. ಕಳೆದ ವರ್ಷದ ಪ್ರತಿಭಾ ಕಾರಂಜಿ ತಾಲೂಕು ಮಟ್ಟದ ಕಥೆ ಹೇಳುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದು, ಏಕಪಾತ್ರ ಅಭಿನಯದಲ್ಲಿಯೂ ಹಲವು ಬಹುಮಾನಗಳನ್ನು ಪಡೆದಿದ್ದಾಳೆ.
ರಾಜ್ಯಮಟ್ಟದ ವೇದಿಕೆಗಳಲ್ಲಿ ಪ್ರತಿಭೆ ಅನಾವರಣ ರಾಜ್ಯಮಟ್ಟದ ಕುಣಿತ ಭಜನೆ ಹಾಗೂ ಮಕ್ಕಳ ಹಬ್ಬ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವ ಗಾನವಿ, ಸಾರ್ವಜನಿಕ ಗಣೇಶೋತ್ಸವ, ಶಾರದೋತ್ಸವ ಸೇರಿದಂತೆ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲೂ ಬಹುಮಾನ ಪಡೆದಿದ್ದಾಳೆ. ಮುಲ್ಕಿ ಅರಸು ಕಂಬಳ, ಸಾವಿರ ಕಂಬದ ಬಸದಿ, ಉಡುಪಿ ಕೃಷ್ಣ ಮಠ, ಕಟೀಲು ಹಾಗೂ ಕೊಲ್ಲೂರಿನಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕಲಾ ಪ್ರದರ್ಶನ ನೀಡಿದ್ದಾಳೆ. ಸಾರಂಗ್ ರೇಡಿಯೋ 107.8 ಎಫ್.ಎಂ.ನಲ್ಲೂ ತನ್ನ ಪ್ರತಿಭೆ ಅನಾವರಣಗೊಳಿಸಿದ್ದಾಳೆ.
ಮಾರ್ಗದರ್ಶನವೇ ಯಶಸ್ಸಿನ ಬಲ ವಾಯ್ಸ್ ಆಫ್ ಆರಾಧನಾ ತಂಡದ ಮುಖ್ಯಸ್ಥೆ ಪದ್ಮಶ್ರೀ ಮೇಡಂ ಅವರ ಮಾರ್ಗದರ್ಶನದಲ್ಲಿ 80ಕ್ಕೂ ಹೆಚ್ಚು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವ ಗಾನವಿ, ಹಲವು ಅಭಿನಂದನಾ ಪತ್ರಗಳನ್ನು ಪಡೆದಿದ್ದಾಳೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಾನಪದ ನೃತ್ಯ ಕಾರ್ಯಕ್ರಮ, ಅಭಿಮತ ಟಿವಿ ಚಾನೆಲ್‌ನ ಪ್ರತಿಭಾ ಲೋಕ ಹಾಗೂ ಪ್ರತಿಭಾ ಚುಕ್ಕಿ ಕಾರ್ಯಕ್ರಮಗಳಲ್ಲೂ ಭಾಗವಹಿಸಿ ಮೆಚ್ಚುಗೆ ಗಳಿಸಿದ್ದಾಳೆ.
ಪ್ರಶಸ್ತಿಗಳ ಮೂಲಕ ಸಾಧನೆಗೆ ಮನ್ನಣೆ ಲಯನ್ಸ್ ಕ್ಲಬ್ ಕಾರ್ಕಳ ಸೆಂಟ್ರಲ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪತ್ರ ಪಡೆದಿರುವ ಗಾನವಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೈಸೂರು ಕಾರ್ಯಕ್ರಮದಲ್ಲೂ ಭಾಗವಹಿಸಿ ಪ್ರಶಂಸೆಗೆ ಪಾತ್ರಳಾಗಿದ್ದಾಳೆ. ಆಕ್ಸಿಸ್ ಮ್ಯಾಕ್ಸ್ ಲೈಫ್ ಇನ್ಶುರೆನ್ಸ್ ನೀಡುವ ಕಲಾ ರತ್ನ ಪ್ರಶಸ್ತಿ ಹಾಗೂ ಸಮಾಜ ಕಲ್ಯಾಣ ಸಂಸ್ಥೆ ಬೆಂಗಳೂರು ಮತ್ತು ವಿಶ್ವ ಕನ್ನಡ ಜಾನಪದ ಪರಿಷತ್ ಬೆಂಗಳೂರು ವತಿಯಿಂದ ಪ್ರದಾನವಾದ ಸುವರ್ಣ ಕರ್ನಾಟಕ ನಾಟ್ಯ ಮಯೂರಿ ಪ್ರಶಸ್ತಿ ಆಕೆಯ ಸಾಧನೆಗೆ ಮತ್ತಷ್ಟು ಮೆರುಗು ತಂದಿವೆ.