ಮೂಡುಬಿದಿರೆ: ಮಡಂತ್ಯಾರ್‌ನ ಸೆಕ್ರೆಡ್ ಹಾರ್ಟ್ ಇಂಗ್ಲಿಷ್ ಮೀಡಿಯಂ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ಕೃತಿ ಎಲ್. ಪೂಜಾರಿ ಸಂಗೀತ ಮತ್ತು ನೃತ್ಯ ಕ್ಷೇತ್ರದಲ್ಲಿ ತೋರಿದ ಸಾಧನೆಯನ್ನು ಗುರುತಿಸಿ ರಾಜ್ಯ ಮಟ್ಟದ 'ಗಾನಸಿರಿ ಸಾಧನಾ ಸಿರಿ' ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಲಕ್ಷ್ಮಣ್ ಪೂಜಾರಿ ಮತ್ತು ಆರತಿ ಲಕ್ಷ್ಮಣ್ ಪೂಜಾರಿ ದಂಪತಿಯ ಪುತ್ರಿಯಾಗಿರುವ ಕೃತಿ ಎಲ್. ಪೂಜಾರಿ, ಸಂಗೀತ ಕಲಾ ನಿಧಿ ಪ್ರಶಸ್ತಿ ಪುರಸ್ಕೃತ ಕಿರಣ್ ಕುಮಾರ್ ಅವರ ಗಾನಸಿರಿ ಕಲಾ ಕೇಂದ್ರದ ಪುತ್ತೂರು ಮಡಂತ್ಯಾರ್ ಶಾಖೆಯಲ್ಲಿ ಸುಗಮ ಸಂಗೀತ ಅಭ್ಯಾಸ ಮಾಡುತ್ತಿದ್ದಾರೆ. ಅಲ್ಲದೆ, 'ಚಂದುಸ್ ಡ್ಯಾನ್ಸಿಂಗ್ ಕಿಡ್ಸ್ ಫಿಲ್ಮ್ ಡ್ಯಾನ್ಸ್' ತರಗತಿಯಲ್ಲಿ ತರಬೇತಿ ಪಡೆದು ಈಗಾಗಲೇ 35ಕ್ಕೂ ಹೆಚ್ಚು ವೇದಿಕೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ನಮ್ಮ ಕುಡ್ಲ ಚಾನೆಲ್, ಸುದ್ದಿ ಚಾನೆಲ್ ಹಾಗೂ ಯು ಪ್ಲಸ್ ಟಿವಿ ಚಾನೆಲ್ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿರುವ ಕೃತಿ, ನಟ ಅರವಿಂದ್ ಬೋಳಾರ್ ಅವರೊಂದಿಗೆ ಅಭಿನಯಿಸಿದ್ದು, 'ಕನ್ನಡ ಹೆಜ್ಜಾರು' ಸಿನಿಮಾದಲ್ಲೂ ನೃತ್ಯದ ಮೂಲಕ ಪಾತ್ರ ನಿರ್ವಹಿಸಿದ್ದಾರೆ. ದೇವಿ ಕಿರಣ್ ಕಲಾಣಿಕೆತನದಲ್ಲಿ ಭರತನಾಟ್ಯ ಅಭ್ಯಾಸ ಮಾಡುತ್ತಿರುವ ಅವರು, ಸುಗಮ ಸಂಗೀತದಲ್ಲಿಯೂ ತರಬೇತಿ ಪಡೆಯುತ್ತಿದ್ದಾರೆ. ಶೈಕ್ಷಣಿಕ ಕ್ಷೇತ್ರದಲ್ಲಿಯೂ ಉತ್ತಮ ಸಾಧನೆ ಮಾಡುತ್ತಿರುವ ಕೃತಿ, ಚಿತ್ರಕಲೆ, ಯೋಗ, ಓಟದ ಸ್ಪರ್ಧೆ, ಕೃಷ್ಣ ವೇಷ ಸ್ಪರ್ಧೆ ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿದ್ದಾರೆ. ಶಾರದೇ ಫೋಟೋ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದು, ಕುದ್ರೋಳಿ ದಸರಾ ಸಂದರ್ಭದಲ್ಲಿ ಹುಲಿವೇಷ ಪ್ರದರ್ಶನ ಹಾಗೂ ವಿವಿಧ ರೀಲ್ಸ್ ಮತ್ತು ಸಾಹಸ ಪ್ರದರ್ಶನಗಳ ಮೂಲಕವೂ ಗಮನ ಸೆಳೆದಿದ್ದಾರೆ.
ಪ್ರಾಣಿಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಕೃತಿ, ಪ್ರಸ್ತುತ ಪದ್ಮಶ್ರೀ ಮೇಡಂ ಅವರ ವಾಯ್ಸ್ ಆಫ್ ಆರಾಧನಾ ತಂಡದ ಬಾಲ ಪ್ರತಿಭೆಯಾಗಿದ್ದಾರೆ. ಮಕ್ಕಳ ಪ್ರತಿಭೆ ಅನಾವರಣಕ್ಕೆ ವೇದಿಕೆ ಕಲ್ಪಿಸುವುದರ ಜೊತೆಗೆ ಆರ್ಥಿಕವಾಗಿ ಹಿಂದುಳಿದವರಿಗೆ ತಂಡದ ಮೂಲಕ ನೆರವು ನೀಡುವ ಕಾರ್ಯವನ್ನು ಪದ್ಮಶ್ರೀ ಮೇಡಂ ನಡೆಸುತ್ತಿದ್ದು, ಮಕ್ಕಳನ್ನು ಪ್ರೋತ್ಸಾಹಿಸುತ್ತಿದ್ದಾರೆ.