ಮೂಡುಬಿದಿರೆ : ತೋಡಾರು ಸಮೀಪದ ಮೈಟ್ ಕಾಲೇಜು ಹಾಗೂ ಯೆನೆಪೋಯ ಕಾಲೇಜಿನ ನಡುವಿನ ಇಕ್ಕಟ್ಟಾದ ರಸ್ತೆಯಲ್ಲಿ ಡಿಬಿಎಲ್ ಸಂಸ್ಥೆಗೆ ಸೇರಿದ ಲಾರಿಯೊಂದು ಬುಧವಾರ ರಾತ್ರಿ ಅಪಾಯಕಾರಿಯಾಗಿ ರಸ್ತೆಯಲ್ಲೇ ನಿಂತಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರಲ್ಲಿ ಆತಂಕ ಉಂಟುಮಾಡಿದೆ.

ಸ್ಥಳೀಯರ ಮಾಹಿತಿ ಪ್ರಕಾರ, ಲಾರಿ ಕೆಟ್ಟು ನಿಂತಿದ್ದರೂ ಕತ್ತಲಲ್ಲಿ ವಾಹನ ಸವಾರರಿಗೆ ಎಚ್ಚರಿಕೆ ನೀಡುವ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಂಡಿರಲಿಲ್ಲ. ರಿಫ್ಲೆಕ್ಟರ್, ಎಚ್ಚರಿಕೆ ದೀಪ ಅಥವಾ ಬೇರೆ ವಾಹನಗಳಿಗೆ ಮುನ್ನೆಚ್ಚರಿಕೆ ನೀಡುವ ಸೂಚನಾ ವ್ಯವಸ್ಥೆ ಇಲ್ಲದ ಕಾರಣ ರಾತ್ರಿ ವೇಳೆ ಸಂಚರಿಸುವವರಿಗೆ ಅಪಘಾತ ಸಂಭವಿಸುವ ಭೀತಿ ಎದುರಾಗಿದೆ.

ಇಕ್ಕಟ್ಟಾದ ರಸ್ತೆಯಲ್ಲಿ ಈಗಾಗಲೇ ವಾಹನ ಸಂಚಾರ ಕಷ್ಟಕರವಾಗಿರುವ ಹಿನ್ನೆಲೆಯಲ್ಲಿ, ರಸ್ತೆಯಲ್ಲೇ ನಿಂತಿದ್ದ ಭಾರೀ ಲಾರಿಯಿಂದ ಒಂದು ವಾಹನ ಸಾಗುವುದಕ್ಕೂ ತೊಂದರೆ ಉಂಟಾಗಿತ್ತು ಎಂದು ಸಾರ್ವಜನಿಕರು ತಿಳಿಸಿದ್ದಾರೆ.

ಡಿಬಿಎಲ್ ಸಂಸ್ಥೆಯ ವಾಹನಗಳು ರಾಷ್ಟ್ರೀಯ ಹೆದ್ದಾರಿಯ ವಿವಿಧ ಭಾಗಗಳಲ್ಲಿ ಪದೇ ಪದೇ ಕೆಟ್ಟು ನಿಂತಿರುವ ಘಟನೆಗಳು ಕಂಡುಬರುತ್ತಿದ್ದು, ಇಂತಹ ಸಂದರ್ಭಗಳಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಪಾಲಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ವಾಹನಗಳಲ್ಲಿ ಬ್ರೇಕ್ ಲೈಟ್, ನಂಬರ್ ಪ್ಲೇಟ್, ರಿಫ್ಲೆಕ್ಟರ್ ಸೇರಿದಂತೆ ಕಡ್ಡಾಯ ಸುರಕ್ಷತಾ ವ್ಯವಸ್ಥೆಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಸಮಗ್ರ ತಪಾಸಣೆ ನಡೆಸಬೇಕು. ವಾಹನಗಳ ದಾಖಲೆಗಳು ಹಾಗೂ ವಿಮೆ ಸೇರಿದಂತೆ ಎಲ್ಲ ನಿಯಮಗಳ ಅನುಸರಣೆಯನ್ನು ಪರಿಶೀಲಿಸಿ, ನಿಯಮ ಉಲ್ಲಂಘನೆ ಕಂಡುಬಂದರೆ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ವ್ಯಕ್ತವಾಗಿದೆ.

ಕೆಲ ಸಾರ್ವಜನಿಕರು ವಯನಾಡು ಹಾಗೂ ಕೇರಳದ ಇತರ ಭಾಗಗಳಲ್ಲಿಯೂ ಡಿಬಿಎಲ್ ಸಂಸ್ಥೆಯ ಕಾಮಗಾರಿ ಮತ್ತು ಸುರಕ್ಷತಾ ನಿರ್ವಹಣೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.