ಮೂಡುಬಿದಿರೆ: ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನತಾನಗರ, ಬಿ.ಟಿ. ರಸ್ತೆ, ಕುಕ್ಕುಂಜೆ, ಕಡಂದಲೆ, ಜೋಡಿಕಟ್ಟೆ ಪ್ರದೇಶಗಳಲ್ಲಿ ಹಲವು ವರ್ಷಗಳಿಂದ ಸಮರ್ಪಕ ಮೊಬೈಲ್ ನೆಟ್‌ವರ್ಕ್ ಲಭ್ಯವಾಗದ ಕಾರಣ ಸಾರ್ವಜನಿಕರು, ಶಿಕ್ಷಕರು, ಬಿಎಲ್‌ಒಗಳು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಪ್ರಮುಖ ದೂರಸಂಪರ್ಕ ಸಂಸ್ಥೆಗಳ ಸಿಗ್ನಲ್ ಬಹುತೇಕ ಲಭ್ಯವಾಗದೇ, ದಿನನಿತ್ಯದ ಸಂಪರ್ಕ ವ್ಯವಸ್ಥೆ, ತುರ್ತು ಸೇವೆಗಳು, ಸರ್ಕಾರಿ ಕಾರ್ಯಗಳ ಮೇಲೂ ಪರಿಣಾಮ ಬೀರಿದೆ.
ತುರ್ತು ಸೇವೆಗಳಿಗೂ ಅಡ್ಡಿ ಮೊಬೈಲ್ ಸಂಪರ್ಕದ ಕೊರತೆಯಿಂದ ಹಠಾತ್ ಅನಾರೋಗ್ಯ ಉಂಟಾದ ಸಂದರ್ಭಗಳಲ್ಲಿ ಆಸ್ಪತ್ರೆಗೆ ಸಂಪರ್ಕಿಸುವುದು, ರಿಕ್ಷಾ ಅಥವಾ ಆಂಬ್ಯುಲೆನ್ಸ್‌ಗೆ ಕರೆ ಮಾಡುವುದೂ ಕಷ್ಟಕರವಾಗಿದೆ. ಇದರಿಂದ ತುರ್ತು ಪರಿಸ್ಥಿತಿಗಳಲ್ಲಿ ಸ್ಥಳೀಯರು ಅಸಹಾಯಕ ಸ್ಥಿತಿಯನ್ನು ಎದುರಿಸುತ್ತಿದ್ದಾರೆ. "ಈ ಭಾಗದಲ್ಲಿ ಹಲವು ವರ್ಷಗಳಿಂದ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಮುಂದುವರಿದಿದೆ. ತುರ್ತು ಸಂದರ್ಭಗಳಲ್ಲಿ ಆಸ್ಪತ್ರೆಗೆ, ರಿಕ್ಷಾ, ಆಂಬ್ಯುಲೆನ್ಸ್‌ಗೆ ಕರೆ ಮಾಡುವುದೂ ಸಾಧ್ಯವಾಗದ ಪರಿಸ್ಥಿತಿ ಇದೆ. ಸಂಬಂಧಪಟ್ಟ ಅಧಿಕಾರಿಗಳು, ದೂರಸಂಪರ್ಕ ಸಂಸ್ಥೆಗಳು ಶೀಘ್ರ ಕ್ರಮ ಕೈಗೊಂಡು ಹೊಸ ಮೊಬೈಲ್ ಟವರ್ ಅಳವಡಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕು." ಎಂದು ಸಮಾಜ ಸೇವಕ ಜಗದೀಶ್ ಪೂಜಾರಿ ತಿಳಿಸಿದ್ದಾರೆ.
ಶಿಕ್ಷಣ ಕ್ಷೇತ್ರಕ್ಕೂ ಹೊಡೆತ ಈ ಸಮಸ್ಯೆಯ ಪರಿಣಾಮ ಶಿಕ್ಷಣ ಕ್ಷೇತ್ರಕ್ಕೂ ತಟ್ಟಿದೆ. ವಿದ್ಯಾಗಿರಿ ಶಾಲೆ, ಕಡಂದಲೆ ಸುಬ್ರಮಣ್ಯ ಶಾಲೆಯ ಶಿಕ್ಷಕರು, ಸಿಬ್ಬಂದಿ ಸರ್ಕಾರಿ ನಿಯಮದಂತೆ ಪ್ರತಿದಿನ ಮೊಬೈಲ್ ಆಪ್ ಮೂಲಕ ಬಯೋಮೆಟ್ರಿಕ್ ಹಾಜರಾತಿ ದಾಖಲಿಸಬೇಕಿದೆ. ಆದರೆ ನೆಟ್‌ವರ್ಕ್ ಕೊರತೆಯಿಂದ ಹಾಜರಾತಿ ದಾಖಲಿಸಲು ಸಾಧ್ಯವಾಗದೆ, ಕರ್ತವ್ಯಕ್ಕೆ ಹಾಜರಾಗಿದ್ದರೂ ತಾಂತ್ರಿಕವಾಗಿ ಗೈರುಹಾಜರಿ ದಾಖಲಾಗುವ, ಸಂಬಳದ ಮೇಲೂ ಪರಿಣಾಮ ಬೀಳುವ ಆತಂಕ ಎದುರಾಗಿದೆ
ಎಸ್‌ಐಆರ್ ಕಾರ್ಯಕ್ಕೂ ತೊಂದರೆ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಕಾರ್ಯಕ್ಕೂ ನೆಟ್‌ವರ್ಕ್ ಸಮಸ್ಯೆ ಅಡ್ಡಿಯಾಗಿದೆ. ಬಿಎಲ್‌ಒ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಮೊಬೈಲ್ ಆಪ್ ಮೂಲಕ ಸಾರ್ವಜನಿಕರ ಮಾಹಿತಿಯನ್ನು ಸ್ಥಳದಲ್ಲೇ ದಾಖಲಿಸಿ ಅಪ್‌ಲೋಡ್ ಮಾಡಬೇಕಾದರೂ, ಜನತಾನಗರ, ಬಿ.ಟಿ. ರಸ್ತೆ, ಕುಕ್ಕುಂಜೆ, ಕಡಂದಲೆ, ಜೋಡಿಕಟ್ಟೆ ಪ್ರದೇಶಗಳಲ್ಲಿ ನೆಟ್‌ವರ್ಕ್ ಇಲ್ಲದ ಕಾರಣ ಆನ್‌ಲೈನ್‌ನಲ್ಲಿ ಮಾಹಿತಿ ನವೀಕರಿಸಲು ಸಾಧ್ಯವಾಗುತ್ತಿಲ್ಲ.
ಶಾಶ್ವತ ಪರಿಹಾರಕ್ಕೆ ಆಗ್ರಹ ಡಿಜಿಟಲ್ ಯುಗದಲ್ಲಿಯೂ ಈ ಐದು ಪ್ರದೇಶಗಳ ನೂರಾರು ಕುಟುಂಬಗಳು ಸಮರ್ಪಕ ಮೊಬೈಲ್ ಸಂಪರ್ಕದಿಂದ ವಂಚಿತರಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು, ದೂರಸಂಪರ್ಕ ಸಂಸ್ಥೆಗಳು ಶೀಘ್ರ ಕ್ರಮ ಕೈಗೊಂಡು ಹೊಸ ಮೊಬೈಲ್ ಟವರ್ ಅಳವಡಿಸುವ ಮೂಲಕ ದೀರ್ಘಕಾಲದ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.
ವಿಶೇಷ ವರದಿ: ಯಶೋಧರ ವಿ. ಬಂಗೇರ